Home ನಿಮ್ಮ ಜಿಲ್ಲೆ ಬೀದರ ಕಡುಬಡವರಿಗಾಗಿ ಇರುವ ವಸತಿ ಯೋಜನೆಯಲ್ಲಿ ಪಾರದರ್ಶಕತೆ ಇರಲಿ

ಕಡುಬಡವರಿಗಾಗಿ ಇರುವ ವಸತಿ ಯೋಜನೆಯಲ್ಲಿ ಪಾರದರ್ಶಕತೆ ಇರಲಿ

ಬೀದರ: ವಸತಿ, ತೋಟಗಾರಿಕೆ ಮತ್ತು ರೇಷ್ಮೆ ಸಚಿವರಾದ ವಿ.ಸೋಮಣ್ಣ ಅವರು ಡಿ.22ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರೇಷ್ಮೆ, ವಸತಿ ಮತ್ತು ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಿವಿಧ ವಿಷಯಗಳ ಪ್ರಗತಿ ಪರಿಶೀಲನೆ ನಡೆಸಿದರು.

ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ, ಬಸವ ವಸತಿ ಯೋಜನೆ, ದೇವರಾಜು ಅರಸು ವಸತಿ ಯೋಜನೆ ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ವಿವಿಧ ಗ್ರಾಮೀಣ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕಡುಬಡವರಿಗಾಗಿ ಇರುವ ವಸತಿ ಯೋಜನೆ ಅನುಷ್ಠಾನದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಗುಡಿಸಲು ಮುಕ್ತ ಕ್ಷೇತ್ರ ಮಾಡಲು ನಿಮ್ಮ ನಿಮ್ಮ ಕ್ಷೇತ್ರದಲ್ಲಿ ನೀವು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬೀದರ ಜಿಲ್ಲೆಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳನ್ನು ನೀಡಬೇಕು ಎಂದು ವಸತಿ ಸಚಿವರಲ್ಲಿ ಮನವಿ ಮಾಡಿದ ಪಶು ಸಂಗೋಪನೆ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ವಕ್ಫ್ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು.ಬಿ.ಚವ್ಹಾಣ್ ಅವರು, ಬೀದರ ಜಿಲ್ಲೆಯಲ್ಲಿ ಗ್ರಾಮೀಣ ವಸತಿ ಯೋಜನೆಗಳ ಪ್ರಗತಿ ತೃಪ್ತಿಕರವಾಗಿಲ್ಲ. ವಸತಿ ನಿರ್ಮಾಣದ ಕಾಮಗಾರಿಯು ಕಳಪೆ ಆಗಿದೆ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಇದರಲ್ಲಿ ತಪ್ಪಿತಸ್ಥರಾದವರಿಗೆ ಶಿಕ್ಷೆಯಾಗಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಗಳಡಿ ಲಕ್ಷಾಂತರ ಮನೆಗಳು ನಿರ್ಮಾಣವಾಗಿವೆ. ಆದರೆ, ಅವು ಯಾರಿಗೆ ತಲುಪಿವೆ? ಕಟ್ಟಿದ ಮನೆಗಳ ಸ್ಥಿತಿಗತಿ ಏನು? ಎಂಬುದನ್ನು ತಿಳಿಯಲು ಇದನ್ನು ತನಿಖೆಗೊಳಪಡಿಸುವುದು ಅತೀ ಅಗತ್ಯವಿದೆ ಎಂದು ಸಂಸದರಾದ ಭಗವಂತ ಖೂಬಾ ಅವರು ಕೂಡ ಇದೆ ವೇಳೆ ಒತ್ತಾಯಿಸಿದರು.
ತನಿಖೆಗೆ ಕ್ರಮ: ಈ ವೇಳೆ ಮಾತನಾಡಿದ ಸಚಿವರಾದ ವಿ.ಸೋಮಣ್ಣ ಅವರು, ಸಿಇಓ ಅವರ ಅಧ್ಯಕ್ಷತೆಯಲ್ಲಿ ತನಿಖಾ ತಂಡ ರಚಿಸಿ, ಗ್ರಾಮೀಣ ವಸತಿ ಯೋಜನೆಗಳ ಅನುóಷ್ಠಾನದ ವಾಸ್ತವ ಸ್ಥಿತಿ ಪರಿಶೀಲಿಸಿ ವರದಿ ಪಡೆಯಲಾಗುವುದು. ಈ ವರದಿಯನ್ನು ಬಳಿಕ ನಿವೃತ್ತ ಕೆಎಎಸ್ ಅಧಿಕಾರಿಗಳನ್ನೊಳಗೊಂಡ ಥರ್ಡ್ ಪಾರ್ಟಿಯಿಂದಲೂ ಪರಿಶೀಲಿಸಲಾಗುವುದು. ಆಗ ನಡೆದದ್ದೇನು ಎಂಬುದು ತಿಳಿಯಲಿದೆ. ಬಳಿಕ ತಪ್ಪಿತಸ್ಥರೆಂದು ಕಂಡು ಬರುವ ಅಧಿಕಾರಿಗಳ ಮೇಲೆ ಯಾವುದೇ ಮುಲಾಜಿಲ್ಲದೇ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಕಾರ್ಯನಿರ್ವಹಣಾಧಿಕಾರಿಗಳಿಗೆ ನಿರ್ದೇಶನ: ತಮ್ಮ ತಮ್ಮ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿಗಳು ಎಷ್ಟು? ಪಂಚಾಯಿತಿವಾರು ಇರುವ ಹಳ್ಳಿಗಳೆಷ್ಟು? ಆಯಾ ಹಳ್ಳಿಗಳಲ್ಲಿ ಇರುವ ಜನಸಂಖ್ಯೆ ಎಷ್ಟು? ಆಯಾ ಪಂಚಾಯಿತಿ, ಗ್ರಾಮಗಳಲ್ಲಿ ಬೇರೆ ಬೇರೆ ವಸತಿ ಯೋಜನೆಗಳಡಿ ನೀಡಿರುವ ಮನೆಗಳೆಷ್ಟು? ಎಷ್ಟು ಮನೆಗಳು ಪೂರ್ಣಗೊಂಡಿವೆ.? ಕಟ್ಟಿರುವ ಮನೆಗಳ ಸ್ಥಿತಿಗತಿ ಏನು? ಎಂಬುದು ಸೇರಿದಂತೆ ಎಲ್ಲಾ ಮಾಹಿತಿಯನ್ನು ಕೂಡಲೇ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನೀಡಬೇಕು ಎಂದು ಆಯಾ ತಾಲೂಕುಗಳ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಚಿವರು ಸೂಚಿಸಿದರು.
ನಿಖರವಾದ ಮಾಹಿತಿ ನೀಡಿ: ಆಯಾ ಇಓಗಳು ಪ್ರವಾಸ ನಡೆಸಿ, ಪಂಚಾಯಿತಿವಾರು ಭೇಟಿ ನೀಡಿ, ಗ್ರಾಮೀಣ ವಸತಿ ಯೋಜನೆಗಳ ಅನುಷ್ಠಾನದ ನಿಕರ ಮಾಹಿತಿ ಪಡೆದುಕೊಳ್ಳಬೇಕು. ಬಾಕಿ ಉಳಿದ ಮನೆಗಳನ್ನು ಪೂರ್ಣಗೊಳಿಸಲು ಎಷ್ಟು ಅನುದಾನ ಬೇಕು ಎಂಬುದರ ಬಗ್ಗೆ ಫಲಾನುಭವಿಯ ಹೆಸರನ್ನೊಳಗೊಂಡು ವಿವರ ನೀಡಿದಲ್ಲಿ ಅಗತ್ಯ ಅನುದಾನ ಬಿಡುಗಡೆ ಮಾಡಲು ಕ್ರಮವಹಿಸುವುದಾಗಿ ಕೂಡ ಸಚಿವರು ಇದೆ ವೇಳೆ ಇಓಗಳಿಗೆ ತಿಳಿಸಿದರು.
ಶಾಸಕರು ಮಾಹಿತಿ ಕೊಡಬೇಕು: ನಮ್ಮ ಕ್ಷೇತ್ರದಲ್ಲಿ, ಇಂತಿಷ್ಟು ಗ್ರಾಮಗಳಲ್ಲಿ ಇಂತಿಷ್ಟು ಮನೆಗಳಾಗಿವೆ ಎಂಬುದರ ಬಗ್ಗೆ ಇನ್ಮುಂದೆ ಆಯಾ ಕ್ಷೇತ್ರಗಳ ಶಾಸಕರು ಕೂಡ ಮಾಹಿತಿ ಕೊಡಬೇಕು. ಶಾಸಕರು ಖುದ್ದು ಕೆಲವು ಕಡೆಗಳಿಗೆ ಭೇಟಿ ನೀಡಿ ಮನೆಗಳನ್ನು ನೋಡಿದ ಬಗ್ಗೆ ತಿಳಿಸಬೇಕು ಎಂದು ಸಚಿವರಾದ ಸೋಮಣ್ಣ ಅವರು ಹೇಳಿದರು.
ಜ.15ರ ನಂತರ ಜಿಎಂ ಬೀದರನಲ್ಲಿ: ಇಓಗಳು, ಸಿಇಓ ಅವರಿಗೆ ನೀಡಿದ ಮಾಹಿತಿಯನ್ನು ಜನರಲ್ ಮ್ಯಾನೇಜರ್ ಅವರು ಪರಿಶೀಲನೆ ನಡೆಸುತ್ತಾರೆ. ಇದಕ್ಕಾಗಿ ಜ.15ರ ನಂತರ ಜನರಲ್ ಮ್ಯಾನೇಜರ್ ಅವರು ಬೀದರನಲ್ಲಿ 10 ದಿನಗಳ ಕಾಲ ಉಳಿಯಲಿದ್ದಾರೆ ಎಂದು ಇದೆ ವೇಳೆ ಸಚಿವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ರಹೀಂ ಖಾನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಗ್ಯಾನೇಂದ್ರಕುಮಾರ ಗಂಗವಾರ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ ಬಾವುಗೆ, ರೇಷ್ಮೆ ಇಲಾಖೆಯ ಅಧಿಕಾರಿ, ವಿವಿಧ ತಾಲೂಕುಗಳ ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತನ ಯೋಜನಾ ನಿರ್ದೇಶಕರಾದ ವಿಜಯಕುಮಾರ ಮಡ್ಡೆ, ಸಹಾಯಕ ಯೋಜನಾಧಿಕಾರಿ ಮಕರಂದ ಕುಲಕರ್ಣಿ ಹಾಗೂ ಇತರರು ಇದ್ದರು.

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …