ಬೀದರ-ವಿದೇಶಗಳಿಂದ ಬಂದ ಜನರ ಆರೋಗ್ಯ ಸ್ಥಿರ
ಬೀದರ- ಬೀದರ ಜಿಲ್ಲೆಯ 126 ಜನರು ಕಳೆದ ಒಂದು ತಿಂಗಳ ಅವಧಿಯಲ್ಲಿ ಹೊರ ದೇಶಗಳಿಂದ ಬೀದರಗೆ ಆಗಮಿಸಿದ್ದಾರೆ ಎನ್ನುವ ಮಾಹಿತಿ ಇದೆ. ಬಸವಕಲ್ಯಾಣ ತಾಲೂಕಿನ ಕಿಟ್ಟಾ ಗ್ರಾಮದಲ್ಲಿನ ಇಬ್ಬರಿಗೆ ವೈದ್ಯಕೀಯ ತಪಾಸಣೆ ನಡೆಸಿ ಅವರ ಗಂಟಲು ದ್ರವ ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ. ವರದಿ ಬರುವುದು ಬಾಕಿ ಇದೆ. ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಮಹಾದೇವ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾ.16ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾರಾದರೂ ಹೊರ ದೇಶ, ಹೊರ ರಾಜ್ಯ ಅಥವಾ ಸೋಂಕು ಪೀಡಿತ ಪ್ರದೇಶಗಳಿಂದ ಬಂದವರು ತಮ್ಮ ಓಣಿ ಅಥವಾ ಬೀದಿಯಲ್ಲಿ ಕಂಡು ಬಂದರೆ ಅಂಥವರ ಬಗ್ಗೆ ಜಿಲ್ಲಾಡಳಿತ, ಆರೋಗ್ಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಕೇಂದ್ರದ ಮೂಲಕ ಜಿಲ್ಲಾಡಳಿತದ ಗಮನಕ್ಕೆ ತಂದಲ್ಲಿ ಅವರ ಮೇಲೆ ನಿಗಾ ವಹಿಸಲಾಗುತ್ತದೆ. ರೋಗ ಲಕ್ಷಣಗಳೇನಾದರೂ ಕಾಣಿಸಿದಲ್ಲಿ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ವಿವಿಧ ಸಮಿತಿಗಳ ರಚನೆ: ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತವು ವಿವಿಧ ಸಮಿತಿಗಳನ್ನು ರಚಿಸಿದೆ. ಜಿಲ್ಲೆಯಲ್ಲಿ ಕ್ಷಿಪ್ರ ಪ್ರತಿಕ್ರಿಯಾ ತಂಡ ರಚಿಸಿದ್ದು, ಯಾರಾದರೂ ಹೊರದೇಶಗಳಿಂದ ಬಂದರೆ, ಅವರಲ್ಲಿ ರೋಗ ಲಕ್ಷಣಗಳು ಕಾಣಿಸಿದಲ್ಲಿ ಅಥವಾ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದಲ್ಲಿದ್ದು, ರೋಗ ಲಕ್ಷಣಗಳು ಕಾಣಿಸಿದಲ್ಲಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಅವರನ್ನು ತಪಾಸಣೆಗೆ ಒಳಪಡಿಸುವುದು ಮತ್ತು ಚಿಕಿತ್ಸೆ ನೀಡಲಾಗುತ್ತದೆ. ಪ್ರತಿ ತಾಲೂಕಿನಲ್ಲಿಯೂ ಒಂದು ತಂಡ ಸಿದ್ದವಿದೆ ಎಂದರು.
ಜಿಲ್ಲಾ ಕಣ್ಗಾವಲು ಪಡೆ: ಜಿಲ್ಲಾ ಕಣ್ಗಾವಲು ಪಡೆ ರಚಿಸಿದ್ದು, ಪ್ರತಿ ಜಿಲ್ಲೆಯಿಂದ ಬರುವ ಮಾಹಿತಿ ಸಂಗ್ರಹಿಸಿ, ಸ್ಥಿತಿಗತಿಗಳನ್ನು ತಿಳಿಯಲಾಗುತ್ತದೆ. ಅಲ್ಲದೇ ಪೂಣೆ, ಮುಂಬೈಗಳಂದ ನಗರಗಳಿಂದ ಬರುವವರ ಮೇಲೆ ನಿಗಾ ವಹಿಸಲಾಗುತ್ತದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾನವ ಸಂಪನ್ಮೂಲ ನಿರ್ವಹಣಾ ಸಮಿತಿ ರಚಿಸಿದ್ದು, ಕೊರೋನಾ ವೈರಸ್ ನಿಯಂತ್ರಣಕ್ಕೆ ಸಿಬ್ಬಂದಿಗಳನ್ನು ಆಯ್ಕೆ ಮಾಡುವುದು, ಅವರಿಗೆ ತರಬೇತಿ ನೀಡುವುದು ಹೇಗೆ ಎನ್ನುವ ಬಗ್ಗೆ ತೀರ್ಮಾನಿಸುತ್ತದೆ.
ತರಬೇತಿ ಮತ್ತು ಜಾಗೃತಿ ಸಮಿತಿ: ಅದರಂತೆ ತರಬೇತಿ ಮತ್ತು ಜಾಗೃತಿ ಸಮಿತಿಯನ್ನು ರಚಿಸಿದ್ದು, ಖಾಸಗಿ ವೈದ್ಯರು, ಔಷಧ ವಿತರಕರು, ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಈವರೆಗೆ 13 ತರಬೇತಿಗಳನ್ನು ನೀಡಲಾಗಿದೆ.
ಸಾಮಗ್ರಿ ನಿರ್ವಹಣಾ ಸಮಿತಿ:ವಿಪತ್ತು ನಿರ್ವಹಣಾ ಅನುದಾನದಲ್ಲಿ ಕಾಯಿಲೆ ನಿಯಂತ್ರಣಕ್ಕಾಗಿ ಯಾವುದೇ ಸಾಮಗ್ರಿಗಳನ್ನು ಖರೀದಿಸಲು ವಾರ್ಷಿಕ ಶೇ.10ರಷ್ಟು ಬಳಕೆ ಮಾಡಲು ಸರ್ಕಾರ ಅನುಮತಿ ನೀಡಿದೆ. ಅವಶ್ಯಕತೆ ಇರುವ ಉಪಕರಣಗಳನ್ನು ಖರೀದಿಸಲು ಸಾಮಗ್ರಿ ನಿರ್ವಹಣಾ ಸಮಿತಿಯನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು. ಶಂಕಿತರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವುದು, ಐಸೋಲೇಟ್ ಮಾಡಿ ಚಿಕಿತ್ಸೆ ಕೊಡಿಸಲು ಅದಕ್ಕೆ ಬೇಕಾಗುವ ಸಿದ್ಧತೆಗಳನ್ನು ಮಾಡಿಕೊಳ್ಳಲು ಮೂಲಭೂತ ಸೌಕರ್ಯಗಳ ಸಮಿತಿಯನ್ನು ರಚಿಸಲಾಗಿದೆ ಎಂದು ವಿವರಿಸಿದರು.
ಚಿಕಿತ್ಸೆಗೆ ವ್ಯವಸ್ಥೆ: ಬ್ರಿಮ್ಸ್ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಯಾವುದೇ ವ್ಯಕ್ತಿ ರೋಗದ ಪ್ರಭಾವಕ್ಕೆ ಒಳಗಾದಲ್ಲಿ ತಕ್ಷಣ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ. ಎಲ್ಲ ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 2 ಹಾಸಿಗೆಗಳ ಪ್ರತ್ಯೇಕ ವಾರ್ಡ್‍ಗಳನ್ನು ತೆರೆಯಲಾಗಿದೆ. ಎಲ್ಲ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಈ ತರಬೇತಿ ಕಾರ್ಯಕ್ರಮಗಳನ್ನು ಇನ್ನೂ ತೀವ್ರಗೊಳಿಸಲಾಗುವುದು. ಸಮಸ್ಯೆ ಹೆಚ್ಚಾದಲ್ಲಿ ಉದ್ಘಾಟನೆಗೆ ಸಿದ್ದವಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಬಳಕೆ ಮಾಡಲು ಯೋಜಿಸಲಾಗಿದೆ ಎಂದು ಹೇಳಿದರು.
ಪ್ರತಿ ಹಳ್ಳಿಯಲ್ಲಿಯೂ ಜಾಗೃತಿ: ಕೊರೋನಾ ವೈರಸ್ ಕುರಿತಂತೆ ಎಲ್ಲ ತಾಲೂಕುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರಿಗೆ ಸೂಚಿಸಲಾಗಿದೆ. ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಪೋಸ್ಟರ್‍ಗಳನ್ನು ಹಾಕಲಾಗಿದೆ. ಆದರೆ ಎಲ್ಲರಿಗೂ ಓದಲು ಸಾಧ್ಯವಾಗದ ಕಾರಣ ಜೀಪ್‍ಗಳಲ್ಲಿ ಮೈಕ್‍ಗಳ ಮೂಲಕ ಪ್ರಚಾರ ಮಾಡಲು ಕ್ರಮ ವಹಿಸಲಾಗಿದೆ. ಕೈ ತೊಳೆಯುವ ಬಗ್ಗೆ, ಮಾಸ್ಕ್‍ಗಳನ್ನು ಧರಿಸುವ ವಿಧಾನಗಳ ಬಗ್ಗೆ ತಿಳುವಳಿಕೆ ಮೂಡಿಸಲಾಗುವುದು ಎಂದರು.
ಜಾತ್ರೆಗಳು, ಧಾರ್ಮಿಕ ಕಾರ್ಯಕ್ರಮ ರದ್ಧತಿಗೆ ಕ್ರಮ: ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಒಂದು ತಿಂಗಳವರೆಗೆ ಜಿಲ್ಲೆಯಲ್ಲಿನ ಜಾತ್ರೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಮುಂದೂಡಲು ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಚರ್ಚಿಸಲಾಗುತ್ತಿದೆ. ಕಲಬುರಗಿ, ಮುಂಬೈ, ಉದಗೀರ, ಪುಣೆಗಳಲ್ಲಿ ಕರೋನಾ ವೈರಸ್ ಶಂಕಿತ ಪ್ರಕರಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬೀದರ ಜಿಲ್ಲೆ ಗಡಿ ಭಾಗದಲ್ಲಿರುವುದರಿಂದ ಇಲ್ಲಿನ ಜನತೆ ಎಲ್ಲ ಕಡೆಗೆ ಹೋಗಿ ಬರುವ ಕಾರಣ ಈ ನಿರ್ಣಯ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಗ್ಯಾನೇಂದ್ರಕುಮಾರ ಗಂಗವಾರ್, ಅಪರ ಜಿಲ್ಲಾಧಿಕಾರಿಗಳಾದ ರುದ್ರೇಶ ಗಾಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿ.ಜಿ.ರೆಡ್ಡಿ ಉಪಸ್ಥಿತರಿದ್ದರು.
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















