ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾಮಗಾರಿಗಳ ಅನುದಾನ ಸಮರ್ಪಕ ಬಳಕೆಗೆ ಗಮನಹರಿಸಿ: ದತ್ತಾತ್ರೇಯ ಪಾಟೀಲ ರೇವೂರ
ಬೀದರ ಜಿಲ್ಲೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾಮಗಾರಿಗಳ ಅನುದಾನ ಸಮರ್ಪಕ ಬಳಕೆಗೆ ಗಮನಹರಿಸಿ: ದತ್ತಾತ್ರೇಯ ಪಾಟೀಲ ರೇವೂರ
ಬೀದರ:06-02-21: ರಾಜ್ಯ ಸರ್ಕಾರವು ಹಿಂದಿನ ಅವಧಿಗಿಂತಲೂ ಈ ಅವಧಿಯಲ್ಲಿ ಹೆಚ್ಚಿನ ಅನುದಾನವನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ನೀಡಿದ್ದು, ಅನುದಾನ ಸಮರ್ಪಕ ಬಳಕೆಗೆ ಗಮನ ಹರಿಸಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲ ರೇವೂರ ಅವರು ಎಲ್ಲ ಅನುಷ್ಠಾನಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಫೆ.6ರಂದು ನಡೆದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಬೀದರ ಜಿಲ್ಲೆಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳ ವಿಶೇಷ ಆಸಕ್ತಿಯಿಂದ ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಲಾಗಿದೆ. ಮಂಡಳಿಯಲ್ಲಿ ಹಣಕಾಸಿನ ತೊಂದರೆ ಇಲ್ಲ. ಇದನ್ನು ಎಲ್ಲ ಅನುಷ್ಠಾನಾಧಿಕಾರಿಗಳು ಅರಿಯಬೇಕು. ಮಂಡಳಿಯು
ನಿಗದಿಪಡಿಸಿದ ಅವಧಿಗೆ ಮತ್ತು ಸಭೆಯಲ್ಲಿ ತಾವು ನೀಡಿದ ಸಮಯದ ಅವಧಿಯೊಳಗೆ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.
2018-19ನೆ ಸಾಲಿನಲ್ಲಿನ ಎಲ್ಲ ಬಾಕಿ ಕಾಮಗಾರಿಗಳು ಮಾರ್ಚದೊಳಗೆ ಪೂರ್ಣವಾಗಬೇಕು. 2019-20ನೇ ಸಾಲಿನಲ್ಲಿ ತೆಗೆದುಕೊಂಡ ಮಂಡಳಿಯ ಕಾಮಗಾರಿಗಳನ್ನು ಕೂಡಲೇ ಆರಂಭಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ 2013-14ನೇ ಸಾಲಿನಿಂದ 2019-20ನೇ ಸಾಲಿನವರೆಗೆ ವಿವಿಧ ಇಲಾಖೆಗಳಿಂದ ಚಾಲ್ತಿಯಲ್ಲಿರುವ ಮತ್ತು ಬಾಕಿವಿರುವ ಕೆಲವು ಕಾಮಗಾರಿಗಳ ಪ್ರಗತಿಯ ಹಂತದ ಬಗ್ಗೆ ಚರ್ಚೆ ನಡೆಯಿತು.
ಈ ವೇಳೆ ಮಾತನಾಡಿದ ಅಧ್ಯಕ್ಷರು, ಈ ಭಾಗದ ಜನರಿಗೆ ಅನುಕೂಲ ಆಗಬೇಕು. ಹಿಂದುಳಿದ ಹಣೆಪಟ್ಟಿ ಕಿತ್ತು ಹಾಕಬೇಕು ಎನ್ನುವ ಮಂಡಳಿಯ ಸ್ಥಾಪನೆಯ ಆಶಯವನ್ನು, ಈ ಭಾಗದ ಅಧಿಕಾರಿಗಳೆಲ್ಲರೂ ಅರಿತು ಅನುದಾನ ಬಳಕೆಗೆ ಗಮನ ಕೊಡಬೇಕು ಎಂದರು.
ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿಗಳ ಪ್ರಗತಿಯನ್ನು ಬಾಕಿ ಇರಿಸಿಕೊಂಡ ಪಂಚಾಯತ್ ರಾಜ್ಯ ಎಂಜಿನಿಯರಿಂಗ ವಿಭಾಗದ ಅಭಿಯಂತರರನ್ನು ನಿಮಗೆ ನಿಮ್ಮ ಇಲಾಖೆಯ ಮೇಲೆ ಹಿಡಿತವಿಲ್ಲ ಎಂದು ತರಾಟೆ ತೆಗೆದುಕೊಂಡರು. ತಮ್ಮ ಕೆಳಗಿನ ಅಧಿಕಾರಿಗಳ ಮೇಲೆ
ಹಿಡಿತವಿಟ್ಟುಕೊಳ್ಳಬೇಕು ಎಂದು ಅವರಿಗೆ ಎಚ್ಚರಿಕೆ ನೀಡಿದರು.
ಪಿಆರ್ ಈಡಿ ಅಭಿಯಂತರಿಗೆ ನೊಟೀಸ್: ಎಲ್ಲ ಅನುಷ್ಠಾನಾಧಿಕಾರಿಗಳು ತಮ್ಮ ಹಂತದಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಕಾಲಮಿತಿಯೊಳಗೆ ಕಾಮಗಾರಿಗಳ ಅನುಷ್ಠಾನಕ್ಕೆ ಒತ್ತು ಕೊಡಬೇಕು ಎಂದು ಇದೆ ವೇಳೆಯಲ್ಲಿ ತಿಳಿಸಿದ ಕಲಬುರಗಿ ಪ್ರಾದೇಶಿಕ ವಿಭಾಗದ ಆಯುಕ್ತರು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗಳಾದ ಡಾ. ಎನ್.ವಿ.ಪ್ರಸಾದ್ ಅವರು, ಮಂಡಳಿ ನೀಡುವ ನೊಟೀಸ್ ಗೆ ಸಮರ್ಪಕ ಉತ್ತರ ನೀಡಬೇಕು ಎಂದು ಪಿಆರ್ ಈಡಿ ಅಭಿಯಂತರಿಗೆ ಸೂಚನೆ ನೀಡಿದರು.
ಕ್ರೆಡಿಲ್ ಅಭಿಯಂತರಿಗೆ ಗಡುವು: 2016-17ನೇ ಸಾಲಿನಲ್ಲಿ ಬಾಕಿ ಉಳಿಸಿಕೊಂಡ ಕಾಮಗಾರಿ ವಿಳಂಬಕ್ಕೆ ಅಧ್ಯಕ್ಷರು ಕಾರಣ ಕೇಳಿದರು. ಮುಂದಿನ ಸಭೆ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಕೆ ಆರ್ ಐಡಿ ಎಲ್ ಅಭಿಯಂತರಿಗೆ ಗಡುವು ವಿದಿಸಿದರು.
ಆರೋಗ್ಯ ಇಲಾಖಾಧಿಕಾರಿಗಳಿಗೆ ಎಚ್ಚರಿಕೆ: ಕೊವಿಡ್-19 ವೇಳೆಯಲ್ಲಿ ಕೆಲವು ಸಂಕಷ್ಟದ ಮಧ್ಯೆಯೂ ಮಂಡಳಿಯಿಂದ ಆಸ್ಪತ್ರೆಗಳಿಗೆ ನೀಡಿದ ಅನುದಾನ ಬಳಸದೇ ಇರುವ ಆರೋಗ್ಯ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರಿಂಗ್ ರೋಡ್ ಕಾಮಗಾರಿ ಪೂರ್ಣಗೊಳಿಸಿ: ಸಂಸದರಾದ ಭಗವಂತ ಖೂಬಾ ಅವರು ಮಾತನಾಡಿ, ಬಾಕಿ ಉಳಿಸಿಕೊಂಡ ರಿಂಗ್ ರೋಡ್ ಕಾಮಗಾರಿಯನ್ನು ಏನಾದರು ಮಾಡಿ ಪೂರ್ಣಗೊಳಿಸಿದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಸಲಹೆ ಮಾಡಿದರು.
ಅಧಿಕಾರಿಗಳಿಂದ ಅಸಮರ್ಪಕ ಉತ್ತರ: ಈ ವೇಳೆ ಶಾಸಕರಾದ ರಹಿಂ ಖಾನ್ ಅವರು ಮಾತನಾಡಿ, ಮಾಹಿತಿ ಕೇಳಿದರೆ ಅಧಿಕಾರಿಗಳು ಅಸಮರ್ಪಕ ಉತ್ತರ ನೀಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಿಂಗ್ ರೋಡ್ ಕಾಮಗಾರಿ ಅಪೂರ್ಣಗೊಂಡಿದೆ ಎಂದು ಸಭೆಗೆ ತಿಳಿಸಿದರು.
ಮಂಡಳಿಯ ಅನುದಾನವು ಸಮರ್ಪಕ ಹಂಚಿಕೆಯಾಗಲಿ: ಶಾಸಕರಾದ ರಾಜಶೇಖರ ಬಿ. ಪಾಟೀಲ್ ಅವರು ಮಾತನಾಡಿ, ಮಂಡಳಿಯ ಅನುದಾನವು ಜಿಲ್ಲೆಯ ಎಲ್ಲಾ ಕಡೆಗೆ ಸಮರ್ಪಕ ಹಂಚಿಕೆಯಾಗಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾಧಿಕಾರಿಗಳಿಂದ ಸೂಚನೆ: ಸತತ ವಿಡಿಯೋ ಕಾನ್ಫರೆನ್ಸ್ ನಡೆಸಿ ಪ್ರಗತಿ ಪರಿಶೀಲಿಸಿ ತಿಳಿಸಿದ್ದರೂ ಅನುಷ್ಠಾನಾಧಿಕಾರಿಗಳು ಕಾಮಗಾರಿ ಅನುಷ್ಠಾನಕ್ಕೆ ಒತ್ತು ಕೊಡದಿದ್ದರೆ ಹೇಗೆ ಎಂದು ಕೆಲವು ಅಧಿಕಾರಿಗಳಿಗೆ ಪ್ರಶ್ನಿಸಿದ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್, 2017-18ರಲ್ಲಿ ಬಾಕಿ ಇರುವ 6 ಕಾಮಗಾರಿಗಳನ್ನು ಮಾರ್ಚದೊಳಗೆ ಪೂರ್ಣಗೊಳಿಸಬೇಕು ಎಂದು ಕೆಆರ್ ಐ ಡಿ ಎಲ್ ಅಧಿಕಾರಿಗಳಿಗೆ ಸೂಚಿಸಿದರು. ಮಂಡಳಿಯ ಕಾಮಗಾರಿಗಳ ಅನುಷ್ಠಾನದಲ್ಲಿ ಪಿಆರ್ ಈ ಡಿ ಇಲಾಖೆಯು ಜಿಲ್ಲೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.
ಕರೆ ಸ್ವೀಕರಿಸದಿದ್ದರೆ ಕ್ರಮ: ಕೆಲವು ಅಧಿಕಾರಿಗಳು ಕರೆಯನ್ನು ಸ್ವೀಕರಿಸದೇ ಇರುವ ಬಗ್ಗೆ ಜಿಪಂ ಅಧ್ಯಕ್ಷರಾದ ನಿರ್ಮಲಾ ಮಾನೆಗೋಪಾಳೆ ಅವರು ಸಭೆಯಲ್ಲಿ ಪ್ರಸ್ತಾಪಿಸಿ, ಹೀಗಾದರೆ ಅಭಿವೃದ್ದಿಯನ್ನು ನಿರೀಕ್ಷಿಸಲು ಸಾಧ್ಯವೇ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕರೆಯನ್ನು ಸ್ವೀಕರಿಸದ ಮನಸ್ಥಿತಿಯಲ್ಲಿ ಮುಂದುವರೆದರೆ ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು. ಬೆಂಗಳೂರಿನಲ್ಲಿದ್ದು ಕೆಲಸ ನಡೆಸುವ ಅಸಮರ್ಪಕ ಕಾರ್ಯವೈಖರಿಯನ್ನು ಬಿಟ್ಟು, ಕೇಂದ್ರ ಸ್ಥಾನದಲ್ಲಿದ್ದು ಕೆಲಸ ನಿರ್ವಹಣೆ ಮಾಡಬೇಕು ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಗ್ಯಾನೇಂದ್ರಕುಮಾರ ಗಂಗವಾರ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಭುವನೇಶ ಪಟೇಲ್ ಹಾಗೂ ಇತರರು ಇದ್ದರು.
Date: 06-02-2021 : www.kknewsonline.in
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















