ಈಡೇರಿಲ್ಲ ಮುಖ್ಯಮಂತ್ರಿಗಳ ಭರವಸೆ
ಬಿಎಸ್ಎಸ್ಕೆ ಮುಚ್ಚಿದರೆ ರೈತರ ಗತಿ ಏನು?
ಕಬ್ಬು ಬೆಳೆಸಿದ ರೈತರ ಕೈ ಹಿಡಿಯುವವರು ಯಾರು?
- ದುರ್ಯೋಧನ ಹೂಗಾರ
ಬೀದರ: ಆರ್ಥಿಕ ಸಂಕಷ್ಟದಿಂದ ಬಾಗಿಲು ಮುಚ್ಚಿದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭಿಸುವ ನಿಟ್ಟಿನಲ್ಲಿ ಎಚ್.ಡಿ ಕುಮಾರಸ್ವಾಮಿ ಹಾಗೂ ಬಿ.ಎಸ್ ಯಡಿಯೂರಪ್ಪ ಸೂಕ್ತ ಅನುದಾನ ನೀಡಿ ಕಾರ್ಖಾನೆ ನಿರಂತರ ನಡೆಯುವಂತೆ ಮಾಡುವ ಭರವಸೆ ನೀಡಿದ್ದು, ಇದೀಗ ಆ ಭರವಸೆಗಳು ಈಡೇರಿಸುವ ನಿಟ್ಟಿನಲ್ಲಿ ಅಧಿಕಾರದಲ್ಲಿದವರು ಮುಂದಾಗುತ್ತಿಲ್ಲ ಎಂಬ ನೋವು ಜಿಲ್ಲೆಯ ರೈತರಿಗೆ ಹಾಗೂ ಕಾರ್ಖಾನೆ ಕಾರ್ಮಿಕರಿಗೆ ಕಾಡುತ್ತಿದೆ.
ಕಳೆದ ವರ್ಷ ಎಚ್.ಡಿ ಕುಮಾರಸ್ವಾಮಿ ಬಿಎಸ್ಎಸ್ಕೆಗೆ 20 ಕೋಟಿ ಅನುದಾನ ನೀಡಿ ಕಾರ್ಖಾನೆ ಆರಂಭಕ್ಕೆ ಪ್ರೋತ್ಸಾಹ ನೀಡಿದರು. ಆದರೆ, ಕಳೆದ ವಿಧಾನ ಸಭೆ ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಗಳು ಈಡೇರಿಸುವಲ್ಲಿ ಕುಮಾರಸ್ವಾಮಿ ಮುಂದಾಗಿಲ್ಲ. ಅದೇ ರೀತಿ ಬಿ.ಎಸ್ ಯಡಿಯೂರಪ್ಪ ಚುನಾವಣೆಯಲ್ಲಿ ನೀಡಿದ ಭರವಸೆ ಈಡೇರಿಸುತ್ತಾರಾ ಎಂದು ರೈತರು, ಕಾರ್ಮಿಕರು ಎದುರು ನೋಡುತ್ತಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದ ನಂತರ ಕಾರ್ಖಾನೆಯ ಕಾರ್ಮಿಕರಲ್ಲಿ ಹೊಸ ಉತ್ಸಾವ ಕಂಡು ಬಂದಿತ್ತು. ಬಿಜೆಪಿ ಸರ್ಕಾರ ಹೆಚ್ಚಿನ ಹಣ ನೀಡುವ ಮೂಲಕ ಕಾರ್ಖಾನೆ ಆರಂಭಕ್ಕೆ ಕಾಳಜಿ ವಹಿಸುತ್ತಾರೆ ಎಂದು ತಿಳಿಸಿದುಕೊಂಡಿದ್ದರು. ಆದರೆ, ಸಧ್ಯದ ಸ್ಥಿತಿ ನೋಡುವುದಾದರೆ ಈ ವರ್ಷ ಕಾರ್ಖಾನೆ ಶುರುವಾಗುವುದು ಬಹುತೇಕ ಅನುಮಾನ ಎಂಬAತೆ ಕಾಣುತ್ತಿದ್ದು, ಈ ಮಧ್ಯದಲ್ಲಿ ಸಕ್ಕರೆ ಸಚಿವ ಸಿ.ಟಿ ರವಿ ಜಿಲ್ಲೆಗೆ ಭೇಟಿನೀಡಿದ ಸಂದರ್ಭದಲ್ಲಿ ನೀಡಿದ ಹೇಳಿಕೆಯಿಂದ ಸಕ್ಕರೆ ಕಾರ್ಖಾನೆ ಸಂಪೂರ್ಣ ಬಂದ್ ಆಗಲಿದೆ ಎಂಬ ಸಂದೇಶ ನೀಡಿದ್ದು, ಜಿಲ್ಲೆಯ ರೈತರಲ್ಲಿ ಆತಂಕ ಮನೆ ಮಾಡಿದೆ. ಅಲ್ಲದೆ, ಕಾರ್ಖಾನೆಯಲ್ಲಿ ನೂರಾರು ನೌಕರರು ಹಾಗೂ ಕಾರ್ಮಿಕರು ಕೂಡ ಸಂಕಷ್ಟ ಮತ್ತೆ ಎದುರಿಸುವಂತೆ ಮಾಡಿದೆ.
ರೈತರ ಜೀವನಾಡಿ ಬಿಎಸ್ಎಸ್ಕೆ:
ಬೀದರ್ ಜಿಲ್ಲೆಯ ರೈತರ ಜೀವನಾಡಿ ಎಂದೆ ಗುರುತಿಸಿಕೊಂಡ ಬಿಎಸ್ಎಸ್ಕೆ ಕಾರ್ಖಾನೆ ಪ್ರಸಕ್ತ ವರ್ಷದಲ್ಲಿ ಪ್ರಾರಂಭಿಸುವ ನಿಟ್ಟಿನಲ್ಲಿ ಸಧ್ಯ ಯಾವುದೇ ಸಿದ್ಧತೆಗಳು ನಡೆಯುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಬಿಎಸ್ಎಸ್ಕೆ ಕಾರ್ಖಾನೆ ನಡೆದರೆ ಮಾತ್ರ ಜಿಲ್ಲೆಯ ಇತರೆ ಕಾರ್ಖಾನೆಗೂ ರೈತರಿಗೆ ಸೂಕ್ತ ಬೆಲೆ ನೀಡುತ್ತಾರೆ ಎಂದು ರೈತರು ನಂಬಿದ್ದಾರೆ. ಈ ವರ್ಷ ಬಿಎಸ್ಎಸ್ಕೆ ಕಾರ್ಖಾನೆ ಆರಂಭಗೊಳ್ಳದಿದ್ದರೆ ಬಹುತೇಕ ರೈತರು ಸಂಕಷ್ಟ ಎದುರಿಸುವ ಸಾಧ್ಯತೆಗಳು ಹೆಚ್ಚಿವೆ
24 ಸಾವಿರ ರೈತರ ಗತಿ ಏನು?
ಸಕ್ಕರೆ ಸಚಿವ ಸಿ.ಟಿ ರವಿ ಅವರ ಹೇಳಿಕೆ ಪ್ರಕಾರ ನಷ್ಟದಲ್ಲಿ ನಡೆಯುವ ಕಾರ್ಖಾನೆಗೆ ಸರ್ಕಾರ ಹಣ ಕಲ್ಪಿಸಿದರು ಕೂಡ ಕಾರ್ಖಾನೆ ಲಾಭದಲ್ಲಿ ನಡೆಯುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಸಿದ್ದಾರೆ. ಹಾಗಾದರೆ 24 ಸಾವಿರ ರೈತರ ಗತಿ ಏನು ಎಂಬುವುದು ಯಾರು ಚಿಂತಿಸಬೇಕು ಎಂಬ ಮಾತಿಗೆ ಇದೀಗ ಜಿಲ್ಲಾಡಳಿತ ಉತ್ತರಿಸಬೇಕಾಗಿದೆ. ಈ ವರ್ಷ ಕಾರ್ಖಾನೆ ಬಂದ್ ಆದರೆ ರೈತರ ಹೊಲದಲ್ಲಿನ ಕಬ್ಬು ಯಾವ ಕಾರ್ಖಾನೆಗಳಿಗೆ ಸಾಗಿಸುತ್ತಾರೆ ಎಂಬುವುದು ಅಧಿಕಾರಿಗಳು ಸ್ಪಷ್ಟ ಪಡಿಸಬೇಕಾಗಿದೆ.
ಕಳೆದ ಕೆಲ ವರ್ಷಗಳಿಂದ ಕಾರ್ಖಾನೆಗಳ ಶೇರು ಹೊಂದಿದ ರೈತರ ಕಬ್ಬು ಸಾಗಿಸಬೇಕಾದರೆ ಆಯಾ ಕಾರ್ಖಾನೆಗಳ ಆಡಳಿತ ಮಂಡಳಿ ಸದಸ್ಯರ ಹಾಗೂ ಚುನಾಯಿತ ಜನ ಪ್ರತಿನಿಧಿಗಳ ಶಿಫಾರಸು ಹಚ್ಚಿ ರೈತರು ತಮ್ಮ ಹೊಲದಲ್ಲಿನ ಕಬ್ಬು ಸಾಗಿಸಿದ ಅನೇಕ ಉದಾಹರಣೆಗಳು ಇವೆ. ಇದೀಗ ಒಂದು ಕಾರ್ಖಾನೆ ಸಂಪೂರ್ಣ ಬಂದ್ ಆದರೆ ರೈತರ ಕಬ್ಬು ಯಾವ ಸಂದರ್ಭದಲ್ಲಿ, ಯಾವ ಕಾರ್ಖಾನೆಗಳಿಗೆ ಸಾಗಿಸುತ್ತಾರೆ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಅಲ್ಲದೆ, ಕಳೆದ ನಾಲ್ಕು ವರ್ಷಗಳಿಂದ ಪೂರ್ಣ ಪ್ರಮಾಣದ ಸಂಬಳ ಪಡೆಯದೆ ಕೆಲಸ ನಿರ್ವಹಿಸುತ್ತಿರುವ ನೌಕರರ ಹಾಗೂ ಕಾರ್ಮಿಕರಿಗೆ ಯಾವ ಕಾರ್ಖಾನೆಯಲ್ಲಿ ಉದ್ಯೋಗ ಕಲ್ಪಿಸುತ್ತಾರೆ ಎಂಬ ಮಾಹಿತಿ ಇಂದಿಗೂ ಲಭ್ಯವಾಗಿಲ್ಲ.
ಅನುದಾನ ತರಲು ಮುಂದಾಗದ ಜನ ಪ್ರತಿನಿಧಿಗಳು..
ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ನಿಟ್ಟಿನಲ್ಲಿ ಇಂದಿಗೂ ಮುಖ್ಯಮಂತ್ರಿಗಳಿಗೆ ಭೇಟಿಮಾಡಿ ಮನವಿ ಮಾಡಿಲ್ಲ ಎಂದು ಜಿಲ್ಲೆಯ ರೈತರು ಆರೋಪಿಸುತ್ತಿದ್ದಾರೆ. ಅಲ್ಲದೆ, ಜಿಲ್ಲೆಯ ಇತರೇ ಶಾಸಕರು ಕೂಡ ಕಾರ್ಖಾನೆ ಬಗ್ಗೆ ಮಾತಾಡುತ್ತಿಲ್ಲ ಯಾಕೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಈ ಹಿಂದೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಉಸ್ತುವಾರಿ ಸಚಿವ ಚವ್ಹಾಣ್ ಬಿಎಸ್ಎಸ್ಕೆ ಪ್ರಾರಂಭಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಭರವಸೆ ನೀಡಿದರು. ಜಿಲ್ಲೆಯ ವಿವಿಧಡೆ ಭೇಟಿನೀಡುತ್ತಿರುವ ಸಚಿವರು ಒಂದು ಭಾರಿ ಕಾರ್ಖಾನೆಗೆ ಭೇಟಿನೀಡಿ ಅಲ್ಲಿನ ಸ್ಥಿತಿ ಗತಿ ತಿಳಿದುಕೊಂಡು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕಾಗಿದೆ.
Date:20-11-2019
ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ
*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…
















