Home ನಿಮ್ಮ ಜಿಲ್ಲೆ ಬೀದರ ಕುತ್ತಿಗೆ ಕತ್ತರಿಸಿದ ಗಾಳಿಪಟ ದಾರ-ಎರಡನೇ ಅವಘಡ

ಕುತ್ತಿಗೆ ಕತ್ತರಿಸಿದ ಗಾಳಿಪಟ ದಾರ-ಎರಡನೇ ಅವಘಡ

ಹುಮನಾಬಾದ: ಗಾಳಿಪಟ ಹಾರಿಸಲು ಬಳಸುವ ಚೈನೀಸ್ ಮಾಂಜಾ (ನೈಲನ್ ದಾರ) ವ್ಯಕ್ತಿಯೊಬ್ಬನ ಜೀವಕ್ಕೆ ಕುತ್ತ ತಂದ ಘಟನೆ ಹುಮನಾಬಾದ ತಾಲೂಕಿನ ಧುಮ್ಮನಸೂರ್ ಮುಖ್ಯರಸ್ತೆಯಲ್ಲಿ ಗುರುವಾರ ಸಂಭವಿಸಿದ್ದು, ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದೆ.
ಖಟಕಚಿಂಚೋಳಿ ಮೂಲದ ದಿಲೀಪ ಕಡಗಂಚಿ ಎಂಬ ವ್ಯಕ್ತಿ ದ್ವಿಚ್ರಕ್ರ ವಾಹನದ ಮೇಲೆ ಖಟಕಚಿಂಚೋಳಿಯಿಂದ ಹುಮನಾಬಾದ ಪಟ್ಟಣಕ್ಕೆ ಆಗಮಿಸುವ ಮಧ್ಯದಲ್ಲಿ ಧುಮ್ಮನಸೂರ್ ಗ್ರಾಮದ ಮುಖ್ಯರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ.

ರಸ್ತೆಯ ಮಧ್ಯದಲ್ಲಿ ಗಾಳಿಪಟದ ದಾರ ಇರುವುದು ಗಮನಕ್ಕೆ ಬರದ ಕಾರಣ ನೈಲನ್ ದಾರ ವ್ಯಕ್ತಿಯ ಕುತ್ತಿಗೆಗೆ ಸುತ್ತಿಕೊಂಡು ಕುತ್ತಿಗೆ ಗಂಭೀರವಾಗಿ ಕತ್ತರಿಸಿದೆ. ಸ್ಥಳದಲ್ಲಿದ ಜನರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಶಸ್ತ್ರಚಿಕಿತ್ಸಕರಾದ ಡಾ| ನಾಗನಾಥ ಹುಲಸೂರೆ ಸೇರಿದಂತೆ ಇತರೆ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದೆ ಎಂದು ಪರಿಗಣಿಸಿದ ವೈದ್ಯರು ಬೇರೆ ಆಸ್ಪತ್ರೆಗೆ ಕೊಂಡೊಯ್ಯುವಂತೆ ಸೂಚಿಸಿದ ಹಿನ್ನೆಲೆಯಲ್ಲಿ, ಕುಟುಂಬಸ್ಥರು ಕಲಬುರಗಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಬುಧವಾರ ಕೂಡ ಚೈನೀಸ್ ಮಾಂಜಾದಿಂದ ಪಟ್ಟಣದ ವ್ಯಕ್ತಿಯೊಬ್ಬನಿಗೆ ಗಂಭೀರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇದೀಗ ಇದು ಎರಡನೇ ಘಟನೆಯಾಗಿದ್ದು, ಪುರಸಭೆ, ತಾಲೂಕು ಆಡಳಿತ, ಪೊಲೀಸ್ ಇಲಾಖೆಗಳು ಎಚ್ಚೆತ್ತುಕೊಂಡು ಮೂರನೇ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕಾಗಿದೆ.

ನಿಷೇಧಿಸಿದ ದಾರ ಬಳಕೆ: ಕಳೆದ ಕೆಲ ವರ್ಷಗಳಿಂದ ಗಾಳಿಪಟ ಹಾರಿಸುವ ಜನರು ಚೈನೀಸ್ ಮಾಂಜಾ ಬಳಸುತ್ತಿದ್ದಾರೆ. ೨೦೧೬ರಲ್ಲಿ ಕರ್ನಾಟಕ ಸರ್ಕಾರ ಚೈನೀಸ್ ಮಾಂಜಾ ನಿಷೇಧಿಸಿ ಆದೇಶ ಹೊರಡಿಸಿತು. ಇದಾದ ನಂತರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಕೂಡ ೨೦೧೭ರಲ್ಲಿ ದೇಶಾದ್ಯಂತ ಮಾಂಜಾ ದಾರವನ್ನು ನಿಷೇಧಿಸಿತು. ಆದರೂ ಕೂಡ ನಿಷೇಧಿತ ದಾರ ಎಲ್ಲಾಕಡೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಇದರ ಪರಿಣಾಮ ಪಕ್ಷಿಗಳು ಹಾಗೂ ಮನುಷ್ಯರು ಅನುಭವಿಸುವಂತಾಗಿದೆ. ಸರ್ಕಾರಗಳ ಆದೇಶಗಳು ಕಡತಕ್ಕೆ ಸೇರಿದೆಯೇ ಹೊರೆತು, ವಾಸ್ತವದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ ಎಂಬುವುದು ಅನೇಕ ಪರಿಸರ ಪ್ರೇಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಟ್ಟೆದಾರ ಬಳಸುವುದು ಸೂಕ್ತ: ಗಾಳಿಪಟ ಹಾರಿಸುವ ಜನರು ನೈಲಾನ್ ದಾರದ ಬದಲಿಗೆ ಬಟ್ಟೆ ದಾರ ಬಳಸುವುದು ಸೂಕ್ತ. ನೈಲಾನ್ ದಾರ ಮಕ್ಕಳಿಗೆ ಹಾನಿ ಉಂಟು ಮಾಡಬಹುದು. ಆದರೆ, ಬಟ್ಟೆದಾರ ಬಳಸುವುದರಿಂದ ಪ್ರಾಣಿ, ಪಕ್ಷಿಗಳಿಗೆ ಹೆಚ್ಚಿನ ಅಪಾಯ ಉಂಟು ಆಗುವುದಿಲ್ಲ. ಬಟ್ಟೆದಾರ ಸುಲಭವಾಗಿ ತುಂಡಾಗುತ್ತದೆ. ಆದರೆ, ನೈಲನ್ ದಾರಮಾತ್ರ ಸರಳವಾಗಿ ತುಂಡಾಗುವುದಿಲ್ಲ ಎಂದು ಅನೇಕ ವ್ಯಾಪರಸ್ಥರು ಮಾಹಿತಿ ನೀಡಿದ್ದಾರೆ.

 

Date: 16-01-2020  Time: 10:40AM

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…