Home ನಿಮ್ಮ ಜಿಲ್ಲೆ ಬೀದರ ಮದ್ಯಪಾನ, ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಮಾರಕ

ಮದ್ಯಪಾನ, ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಮಾರಕ

ಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತ ವಿಚಾರ ಸಂಕಿರಣ

ಬೀದರ: ಕ್ಯಾನ್ಸರ್, ಪಾಶ್ರ್ವ ವಾಯುನಂತಹ ಗಂಭೀರ ಸ್ವರೂಪದ ಕಾಯಿಲೆಗಳನ್ನು ತರುವ ತಂಬಾಕು, ಗುಟಕಾ, ಮದ್ಯ ಸೇವನೆಯಂತಹ ದುಶ್ಚಟಗಳಿಂದ ಯುವಜನತೆ ದೂರವಿರಬೇಕು ಎಂದು ಜಿಲ್ಲಾ ಮಾನಸಿಕ ವಿಭಾಗದ ಮನೋರೋಗ ತಜ್ಞರಾದ ಡಾ. ಅಭಿಜೀತ ಪಾಟೀಲ್ ಹೇಳಿದರು.

ಕರ್ನಾಟಕ ರಾಜ್ಯ ಮದ್ಯಪಾನ ಸ್ವಯಂ ಮಂಡಳಿ ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಬೀದರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಸರ್ಕಾರಿ ಐಟಿಐ ಸಂಸ್ಥೆಯಲ್ಲಿ ನಡೆದ ಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

16ರಿಂದ 23 ವರ್ಷದೊಳಗಿನ ಯುವಕರು ದುಶ್ಚಟಗಳಿಗೆ ಶೀಘ್ರ ಬಲಿಯಾಗುತ್ತಾರೆ. ಮೊದಲಿಗೆ ಮೋಜಿಗಾಗಿ ತಂಬಾಕು, ಗುಟಕಾ ಹಾಗೂ ಮದ್ಯ ಸೇವಿಸಲು ಆರಂಭಿಸುತ್ತಾರೆ. ಮುಂದಿನ ದಿನಗಳಲ್ಲಿ ಅದೇ ಚಟವಾಗಿ ಬದಲಾಗಿ ನಾನಾ ಸಮಸ್ಯೆಗಳನ್ನು ತರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಎಲ್ಲ ರೀತಿಯ ದುಶ್ಚಟಗಳಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ.ಜಬ್ಬಾರ ಮಾತನಾಡಿ, ಜೀವನ ಸುಖಮಯವಾಗಿರಲು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಆರೋಗ್ಯಕ್ಕೆ ಮಾರಕವಾಗಿರುವ ಮದ್ಯಪಾನ, ಮಾದಕ ವಸ್ತುಗಳನ್ನು ಸೇವಿಸಬಾರದು. ವಿದ್ಯಾರ್ಥಿಗಳು ಇದರ ದುಷ್ಪರಿಣಾಮಗಳ ಕುರಿತು ತಮ್ಮ ಮನೆಗಳಲ್ಲಿ ತಿಳುವಳಿಕೆ ಮೂಡಿಸು ಕೆಲಸ ಮಾಡಬೇಕು ಎಂದರು.

ಆರೋಗ್ಯ ಇಲಾಖೆಯಿಂದ ಜಾಗೃತಿ ಜಾಥಾದಂತಹ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಪರಿಣಾಮವಾಗಿ ಜನರಲ್ಲಿ ಮದ್ಯಸೇವನೆ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ತಿಳುವಳಿಕೆ ಮೂಡುತ್ತಿದೆ. ದುಶ್ಚಟಗಳಿಗೆ ಬಲಿಯಾಗುವವರ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿದೆ ಎಂದು ಹೇಳಿದರು.

ಹಿರಿಯ ಸಾಹಿತಿ ಎಂ.ಜಿ.ಗಂಗನಪಳ್ಳಿ ಮಾತನಾಡಿ, ದೇಶದಲ್ಲಿ ಆಹಾರಕ್ಕಿಂತ ಹೆಚ್ಚಿನ ಪ್ರಮಾಣದ ಹಣವನ್ನು ಮದ್ಯ ಮತ್ತು ಮಾದಕ ವಸ್ತುಗಳಿಗಾಗಿ ಖರ್ಚು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು. ದೈಹಿಕ ಮತ್ತು ಮಾನಸಿಕವಾಗಿ ಕುಗ್ಗಿಸುವ ದುಶ್ಚಟಗಳಿಂದ ಸಾಧ್ಯವಾದಷ್ಟು ದೂರವಿರಲು ಪ್ರಯತ್ನಿಸಬೇಕು ಎಂದು ಸಲಹೆ ಮಾಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಗವಿಸಿದ್ಪಪ್ಪ ಹೊಸಮನಿ ಮಾತನಾಡಿ, ಇಡೀ ದೇಶವನ್ನು ಮದ್ಯಪಾನ ಮುಕ್ತ ಮಾಡಬೇಕು ಎನ್ನುವುದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆಶಯವಾಗಿತ್ತು. ಅದರಂತೆ ಆರೋಗ್ಯವನ್ನು ಕೆಡಿಸುವ ತಂಬಾಕು, ಗುಟಕಾ, ಮದ್ಯವನ್ನು ಸೇವಿಸಬಾರದು ಎಂದು ಹೇಳಿದರು. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಶಿವಶಂಕರ ಟೋಕರೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿಯಂತ್ರಣ ವಿಭಾಗದ ಸಹಾಯಕ ಕಾರ್ಯಕ್ರಮ ಅಧಿಕಾರಿ ವೀರಶೆಟ್ಟಿ ಚೆನ್ನಶೆಟ್ಟಿ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ರಾಘವೇಂದ್ರ, ಬಾಬುರಾವ ಪ್ರಭಾಜಿ, ಸುಪ್ರಿತಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ತನ್ವೀರ ಇಕ್ಬಾಲ್, ಬಿಂದುಸಾರ ಧನ್ನೂರ, ತುಳಜಪ್ಪ ಬುಧೇರಾ, ಯಶೋಧಾ, ಸುಧಾರಾಣಿ, ಓಶಿನ್ ಹಾಗೂ ಇತರರು ಉಪಸ್ಥಿತರಿದ್ದರು. ವಿಜಯಕೃಷ್ಣ.ಜಿ.ಸೋಲಪೂರ ಅವರು ನಿರೂಪಿಸಿ ವಂದಿಸಿದರು.

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…