Home ನಿಮ್ಮ ಜಿಲ್ಲೆ ಬೀದರ 550ನೇ ಗುರುನಾನಕ್ ಜಯಂತಿ ಅದ್ದೂರಿ ಆಚರಣೆಗೆ ಸಿದ್ಧತೆ

550ನೇ ಗುರುನಾನಕ್ ಜಯಂತಿ ಅದ್ದೂರಿ ಆಚರಣೆಗೆ ಸಿದ್ಧತೆ

ದೇಶದ ವಿವಿಧಡೆಯಿಂದ ಬರುವ ಭಕ್ತರಿಗೆ ಅನುಕೂಲ ಮಾಡಿ-DC

 ಬೀದರ:  ನವೆಂಬರ್ 10, 11 ಮತ್ತು 12ರಂದು ನಡೆಯುವ 550ನೇ ಗುರುನಾನಕ್ ಜಯಂತಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ ಎಚ್.ಆರ್ ಮಹಾದೇವ ಻ಅಧಿಕಾರಿಗಳಿಗೆ ತಿಳಿಸಿದರು.

 ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗುರುನಾನಕ್ ಜಯಂತಿಯ ಪ್ರಯುಕ್ತ ದೇಶ ವಿದೇಶಗಳಿಂದ ಲಕ್ಷಾಂತರ ಜನರು ಬೀದರ ನಗರಕ್ಕೆ ಆಗಮಿಸುತ್ತಾರೆ. ಅತಿಥಿಗಳ ವಾಸ್ತವ್ಯಕ್ಕೆ ತೊಡಕಾಗಬಾರದು. ಗುರುದ್ವಾರಕ್ಕೆ ಬರುವ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಜನದಟ್ಟಣೆ ನಿರ್ವಹಣೆ ಮತ್ತು ಮೆರವಣಿಗೆಯಲ್ಲಿ ನೂಕುನುಗ್ಗಲು ಉಂಟಾಗದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆ ಹಾಗೂ ಇನ್ನಿತರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

 ಸುಗಮ ಸಂಚಾರ

ನಗರದಲ್ಲಿ ಬಿಡಾಡಿ ದನಗಳಿಂದ ರಸ್ತೆ ಸಂಚಾರಕ್ಕೆ ತೊಡಕಾಗುತ್ತಿದೆ. ಅಂತಹ ದನಗಳನ್ನು ಗೋಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳು ಕೋರಿದರು. ಇದಕ್ಕೆ ಜಿಲ್ಲಾಧಿಕಾರಿಯವರು ಪ್ರತಿಕ್ರಿಯಿಸಿ ನಗರದ ರಸ್ತೆಗಳಲ್ಲಿ ಓಡಾಡುವ ದನಗಳನ್ನು ಸ್ಥಳಾಂತರಿಸಲು ಅಗತ್ಯ ಕ್ರಮ ವಹಿಸುವಂತೆ ನಗರಸಭೆಯ ಪೌರಾಯುಕ್ತರಿಗೆ ನಿರ್ದೇಶನ ನೀಡಿದರು.

ಆ್ಯಂಬುಲೆನ್ಸ್ ಮತ್ತು ಅಗ್ನಿಶಾಮಕ

ಗುರುದ್ವಾರದ ಆವರಣದಲ್ಲಿ ಮತ್ತು ಪಾರ್ಕಿಂಗ್ ಪ್ರದೇಶದಲ್ಲಿ ಆ್ಯಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನವನ್ನು ಒದಗಿಸಬೇಕು. ಬ್ರಿಮ್ಸ್‍ನಿಂದ ಹೆಚ್ಚುವರಿ ಆ್ಯಂಬುಲೆನ್ಸ್ ವಾಹನಗಳು ಸಿದ್ದವಿರಬೇಕು ಎಂದು ಸೂಚಿಸಿದರು. ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಬೀದಿ ದೀಪಗಳು ಸೂಸ್ಥಿತಿಯಲ್ಲಿರಬೇಕು. ತಗ್ಗು ಗುಂಡಿಗಳನ್ನು ಮುಚ್ಚಿಸಬೇಕು. ಕುಡಿಯುವ ನೀರಿಗೆ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಪ್ರತ್ಯೇಕ ವಾಹನಗಳ ವ್ಯವಸ್ಥೆ

ಗುರುದ್ವಾರದ ರಸ್ತೆಯಲ್ಲಿ ವಾಹನಗಳ ದಟ್ಟಣೆಗೆ ಕಡಿವಾಣ ಹಾಕಬೇಕು. ದೊಡ್ಡ ವಾಹನಗಳನ್ನು ಗುರುದ್ವಾರದ ಆವರಣಕ್ಕೆ ಬಿಡಬಾರದು. ಮುಖ್ಯ ಪ್ರವೇಶದ್ವಾರದಿಂದ ಭಕ್ತರನ್ನು ಕರೆದೊಯ್ಯಲು ಪ್ರತ್ಯೇಕ ವಾಹನಗಳ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಗುರುದ್ವಾರದ ಪ್ರಮುಖರಿಗೆ ಸೂಚನೆ ನೀಡಿದರು.

ಕಂಟ್ರೋಲ್ ರೂಂ

ಗುರುದ್ವಾರಕ್ಕೆ ಆಗಮಿಸುವ ಜನರು ತಮ್ಮ ಸಮಸ್ಯೆಗಳನ್ನು ತಿಳಿಸಲು ಕಂಟ್ರೋಲ್ ರೂಂ ಸ್ಥಾಪಿಸಬೇಕು. ವಾಹನಗಳ ತಪಾಸಣೆಗೆ ಹೆಚ್ಚುವರಿ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಟಿ.ಶ್ರೀಧರ್ ಅವರು ತಿಳಿಸಿದರು.

 ಬೀದರ ಸಹಾಯಕ ಆಯುಕ್ತರಾದ ಅಕ್ಷಯ್ ಶ್ರೀಧರ್, ಬೀದರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಲಭೀಮ ಕಾಂಬಳೆ, ಡಿವೈಸ್‍ಪಿ ಬಸವೇಶ್ವರ ಹಿರಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ.ಜಬ್ಬಾರ, ನಗರಸಭೆ ಪೌರಾಯುಕ್ತರಾದ ಬಿ.ಬಸಪ್ಪ, ಸಮಾಜದ ಮುಖಂಡರಾದ ಮನ್‍ಪ್ರೀತ್‍ಸಿಂಗ್ ಬಂಟಿ, ಪುನಿತ್ ಸಿಂಗ್, ಪ್ರದೀಪ್ ಸಿಂಗ್, ತೇಜಪಾಲ್ ಸಿಂಗ್, ರಾಜಪಾಲ್ ಸಿಂಗ್ ಹಾಗೂ ಇತರರು ಸಭೆಯಲ್ಲಿದ್ದರು.

 

 

 

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…