ಸರ್ಕಾರಿ ಆಸ್ಪತ್ರೆಗಳಲ್ಲಿ ರಾತ್ರಿ ವೈದ್ಯರು ಕಡ್ಡಾಯ
ಡೆಂಘೀ ಜಾಗೃತಿ ಮೂಡಿಸಿ-202 ಡೆಂಘೀ ಪ್ರಕರಣ
ಬೀದರ: ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರಾತ್ರಿ ವೇಳೆ ಕಡ್ಡಾಯವಾಗಿ ವೈದ್ಯರು ಹಾಜರಿರುವಂತೆ ಆರೋಗ್ಯ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್‌ನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಉಷಾ ರಾಜೇಂದ್ರ ನಿಟ್ಟೂರಕರ್ ಅರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಡೆಂಗೆ ನಿಯಂತ್ರಣ ಕುರಿತು ಆರೋಗ್ಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಲಭ್ಯವಿರುವುದಿಲ್ಲ ಎಂಬ ದೂರುಗಳು ಎಲ್ಲಿಯೂ ಕೇಳಿಸಬಾರದು. ವೈದ್ಯರು ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕು. ಜಿಲ್ಲಾ ಮಟ್ಟದಲ್ಲಿ ಕೆಲಸ ನಿರ್ವಹಿಸುವ ವೈದ್ಯಾಧಿಕಾರಿಗಳು ತಮ್ಮ ಕಚೇರಿಗೆ ಮಾತ್ರ ಸೀಮಿತವಾಗದೆ ಆಗಾಗ ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿರುವ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಲ್ಲಿನ ವೈದ್ಯರಿಗೆ ಅಗತ್ಯ ಸಲಹೆಗಳನ್ನು ನೀಡಬೇಕು. ಎಲ್ಲಾ ಆಸ್ಪತ್ರೆಗಳಲ್ಲಿ ಮೇಲಧಿಕಾರಿಗಳ ಭೇಟಿಯ ಕುರಿತು ಮಾಹಿತಿ ಲಭ್ಯವಾಗುಂತೆ ವಹಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಡೆಂಗೆ, ಮಲೇರಿಯಾ, ಚಿಕೂನ್‌ಗೂನ್ಯಾ ರೋಗಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಇಂತಹ ರೋಗಗಳು ಬಂದಲ್ಲಿ ಜನರು ಭಯಭೀತರಾಗಿ ಚಿಕಿತ್ಸೆಗಾಗಿ ಬೇರೆ ರಾಜ್ಯಗಳಿಗೆ ಅಲೆಯುತ್ತಾರೆ. ರೋಗ ಪತ್ತೆಯಾದ ತಕ್ಷಣ ಏನು ಮಾಡಬೇಕು?, ರೋಗಗಳು ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು? ಎನ್ನುವ ಬಗ್ಗೆ ಹಳ್ಳಿ ಜನರಿಗೆ ಮನದಟ್ಟು ಮಾಡಬೇಕಿದೆ. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯವು ಇನ್ನಷ್ಟು ಚುರುಕುಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಡೆಂಘೀ ಜಾಗೃತಿ ಮೂಡಿಸಿ
ಡೆಂಗೆ, ಮಲೇರಿಯಾ ಸೇರಿದಂತೆ ಹಲವು ರೋಗಗಳಿಗೆ ಕಾರಣವಾಗುವ ಸೊಳ್ಳೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಆಯೋಜಿಸಬೇಕು.
ಸೊಳ್ಳೆಗಳಿಂದ ಉದ್ಭವವಾಗುವ ರೋಗಗಳ ನಿಯಂತ್ರಣಕ್ಕಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ಯೋಜನಾ ವರದಿಯೊಂದನ್ನು ಸಿದ್ದಪಡಿಸಿ, ಅದರಂತೆ ಕೆಲಸ ನಿರ್ವಹಿಸಬೇಕು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಸಹಾಯ ಪಡೆದು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಡೆಂಘೀ ಮಾಹಿತಿ ಪಡೆಯಿರಿ
ಸರ್ಕಾರಿ ಆಸ್ಪತ್ರೆಗಳಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಡೆಂಗೆ ರೋಗಿಗಳ ಮಾಹಿತಿ ಪಡೆಯಬೇಕು. ರೋಗ ತಪಾಸಣೆ ಮತ್ತು ಚಿಕಿತ್ಸೆ ನೀಡುವಿಕೆಯಲ್ಲಿ ಯಾವುದೇ ರೀತಿಯ ಲೋಪಗಳಾಗದಂತೆ ಕೆಲಸ ನಿರ್ವಹಿಸಬೇಕು. ಜಿಲ್ಲೆಯ ಯಾವುದೇ ಭಾಗದಲ್ಲಿ ಒಂದಕ್ಕಿAತ ಹೆಚ್ಚಿನ ಡೆಂಗೆ ಪ್ರಕರಣಗಳು ಕಾಣಿಸಿದಲ್ಲಿ ತಕ್ಷಣ ಅಲ್ಲಿಗೆ ವೈದ್ಯರನ್ನು ಕಳುಹಿಸಿ ಕೂಡಲೇ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದರು.
202 ಡೆಂಘೀ ಪ್ರಕರಣ
ಜಿಲ್ಲಾ ಮಲೇರಿಯಾ ಅಧಿಕಾರಿ ಡಾ| ಅನಿಲ ಚಿಂತಾಮಣಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಅಕ್ಟೋಬರ್ ಅಂತ್ಯದವರೆಗೆ 202 ಡೆಂಗೆ ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ ಬೀದರ್ 154, ಭಾಲ್ಕಿಯಲ್ಲಿ 12, ಹುಮನಾಬಾದ 6, ಬಸವಕಲ್ಯಾಣ 15 ಹಾಗೂ ಔರಾದ್‌ನಲ್ಲಿ 15 ರೋಗಿಗಳು ಪತ್ತೆಯಾಗಿದ್ದಾರೆ. ರೋಗ ನಿಯಂತ್ರಣಕ್ಕಾಗಿ ಅರೋಗ್ಯ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ರೆಡ್ಡಿ, ಅಂಬಾದಾಸ ಕೋರೆ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ವಿ.ಜಿ.ರೆಡ್ಡಿ, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಡಾ| ರಾಜಶೇಖರ ಪಾಟೀಲ್, ಡಾ| ಕೃಷ್ಣಾ ರೆಡ್ಡಿ, ಡಾ| ದೀಪಾ ಖಂಡ್ರೆ, ಡಾ| ಶರಣಯ್ಯಾ ಸ್ವಾಮಿ, ಡಾ| ಪ್ರವೀಣಕುಮಾರ, ಡಾ| ಅವಿನಾಶ ಎಖ್ಖೆಳ್ಳಿಕರ್, ಡಾ| ಶರಣಪ್ಪ ಮುಡ್ಡಾ, ಡಾ| ಗ್ಯಾನೇಶ್ವರ, ಡಾ| ಅಶೋಕ ಮೈಲಾರೆ, ಡಾ| ಅಪರ್ಣಾ, ಡಾ| ಭಗವಂತರಾವ್, ಫೈಲೇರಿಯಾ ನಿರೀಕ್ಷಕರಾದ ಮೆಹಬೂಬಮಿಯ್ಯಾ, ವೈದ್ಯಾಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















