ರೋಗಿಗಳ ಮಾಹಿತಿ ಕಡ್ಡಾಯವಾಗಿ ನೀಡಿ -ಜಿಲ್ಲಾಧಿಕಾರಿ
ಔಷಧಿ ಖರೀದಿಸುವವರ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವರ ಮಾಹಿತಿ ನೀಡಿ.
ಹುಮನಾಬಾದ: ಖಾಸಗಿ ಆಸ್ಪತ್ರೆಗಳು ಹಾಗೂ ಔಷಧಿ ಅಂಗಡಿಗಳು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಸೇವೆ ನೀಡಬೇಕು. ಕಡ್ಡಾಯವಾಗಿ ಪ್ರತಿದಿನ ಚಿಕಿತ್ಸೆ ಪಡೆದ ರೋಗಿಗಳ ಹಾಗೂ ಔಷಧಿ ಖರೀದಿಸಿದವರ ಸಂಪೂರ್ಣ ಮಾಹಿತಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್ ಮಹಾದೇವ ಸೂಚಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ಖಾಸಗಿ ವೈದ್ಯರ ಹಾಗೂ ಔಷಧಿ ಅಂಗಡಿಗಳ ಮುಖ್ಯಸ್ಥರ ಸಭೆ ನಡೆಸಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳು ಹಾಗೂ ಔಷಧಿ ಅಂಗಡಿಗಳು ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು. ಕೆಮ್ಮು, ಜ್ವರ, ಉಸಿರಾಟ ಸಮಸ್ಯೆ, ನೆಗಡಿ ಎಂದು ಬರುವ ರೋಗಿಗಳ ಮಾಹಿತಿ ಪಡೆದು ಕೂಡಲೇ ತಾಲೂಕು ಮಟ್ಟದ ಆರೋಗ್ಯಾಧಿಕಾರಿಗಳಿಗೆ ತಿಳಿಸಬೇಕು ಎಂದು ಹೇಳಿದರು.
ಎಲ್ಲಾ ಔಷಧಿ ಅಂಗಡಿಗಳ ಮಾಲೀಕರು ಕಡ್ಡಾಯವಾಗಿ ಕಂಪ್ಯೂಟರ್ ಬಿಲ್ ನೀಡುವ ವ್ಯವಸ್ಥೆ ಮಾಡಬೇಕು. ಅಂಗಡಿಯಲ್ಲಿ ಯಾವ ಔಷಧಿಗಳು ಎಷ್ಟು ಪ್ರಮಾಣದಲ್ಲಿ ಇದೆ ಎಂಬುವುದು ಕಡ್ಡಾಯವಾಗಿ ದಾಖಲಾಗಬೇಕು. ಈ ಹಿಂದೇ ಕೂಡ ಈ ಬಗ್ಗೆ ತಿಳುವಳಿಕೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು. ನಿಯಮ ಪಾಲಿಸಿದ ಔಷಧಿ ಅಂಗಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಆಸ್ಪತ್ರೆಗಳ ವೈದ್ಯರು, ರೋಗಿಗಳು ಹಾಗೂ ಔಷಧಿ ಅಂಗಡಿಯವರು ಕಡ್ಡಾಯವಾಗಿ ಮಾಸ್ಕ್ ಬಳಸಬೇಕು. ಅಲ್ಲದೆ, ಹ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಔಷಧಿ ಅಂಗಡಿಯವರು ನೇರವಾಗಿ ಜ್ವರ, ಕೆಮ್ಮು, ನೆಗಡಿ ಹಾಗೂ ಉಸಿರಾಟ ಸಮಸ್ಯೆ ಇರುವ ಜನರಿಗೆ ಔಷಧಿಗಳು ನೀಡಬಾರದು. ನೇರವಾಗಿ ಔಷಧಿ ನೀಡಿದ ಮಾಹಿತಿ ಗೊತ್ತಾದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ಜಿಲ್ಲೆಯಲ್ಲಿ 800 ಔಷಧಿ ಅಂಗಡಿಗಳು ಇದ್ದು, ಈವರೆಗೆ 200 ಅಂಗಡಿಯವರು ಮಾತ್ರ ಮಾಹಿತಿ ನೀಡುತ್ತಿದ್ದಾರೆ. ಸರ್ಕಾರ ನೀಡಿದ ಪಟ್ಟಿಯ ಪ್ರಕಾರ ಎಲ್ಲಾ ಔಷಧಿ ಅಂಗಡಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಮಾಹಿತಿ ನೀಡಬೇಕು ಎಂದು ಎಚ್ಚರಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ವಿ.ಜಿ ರೆಡ್ಡಿ, ಔಷಧಿ ನಿಯಂತ್ರ ಅಧಿಕಾರಿ ಶರಣಬಸಪ್ಪ, ತಹಶೀಲ್ದಾರ ನಾಗಯ್ಯ ಹಿರೇಮಠ, ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ ಮೈಲಾರೆ, ಸರ್ಕಾರಿ ಆಸ್ಪತ್ರೆ ಮುಖ್ಯಸ್ಥ ಡಾ| ನಾಗನಾಥ ಹುಲಸೂರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ಔಷಧಿ ಅಂಗಡಿಗಳ ಮಾಲೀಕರು ಇದ್ದರು.
Date: 03-05-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…