ಯಾಕೆ ಹೀಗೆ ಬಡ ಜೀವವೇ..? (ಕವನ)
ಇಷ್ಟು ಸಣ್ಣ ವಯಸ್ಸು ! ಏನು ಕಂಡಿದೆ ಈ ಜೀವ?
ಚನ್ನಬಸವ ಹೇಡೆ
ಪ್ರಾಚಾರ್ಯ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಗದಲ್
ಆಧುನಿಕ ಬದುಕು ಸೃಷ್ಟಿಸಿರುವ ತಲ್ಲಣಗಳ ಸಣ್ಣ ವಯಸ್ಸಿನ ಪೀಳಿಗೆಗೆ ನಿಭಾಯಿಸಲಾಗುತ್ತಿಲ್ಲ. ಸದಾ ಆತಂಕ, ದುಗುಡ, ವ್ಯಾಕುಲತೆ ಕಾಡುತ್ತ ಕಾಟ ಕೊಡುತ್ತಿವೆ. ಸಣ್ಣ, ಸಣ್ಣ ಕಾರಣಗಳು ದೊಡ್ಡ ಅಲೆಗಳನ್ನು ಅಂತರಂಗದಲ್ಲಿ ಎಬ್ಬಿಸುತ್ತಿವೆ. ಬದುಕು ಸರಾಗವಾಗಿ ಸಾಗಬೇಕಿದದ್ದು ವಿರಾಗವಾಗಿ ಬಿಟ್ಟಿದೆ. ಪಯಣದ ನಡುವಿನ ಸಣ್ಣ ತಾಪತ್ರಯ ಯಾವತ್ತೂ ಬದುಕು ಬಿಗಡಾಯಿಸಲು ಕಾರಣವಾಗಬೇಕಿಲ್ಲ.
ಸುಖದಲ್ಲೂ, ದುಃಖದಲ್ಲೂ ನೆನಪಿಡಬಲ್ಲ ಒಂದು ಮಾತು ಹೇಳಿ ಅಂದಾಗ ನನ್ನ ಬುದ್ಧ ಹೇಳ್ತಾರೆ “ಈ ಕ್ಷಣವೂ ಸರಿದು ಹೋಗುತ್ತದೆ ” ಅಂತ. ನಮ್ಮ ದೇಹ ಸದಾ ಸುಖ ಬಯಸುತ್ತಿರುತ್ತದೆ. ಪದೇ ಪದೇ ಸುಖವೆ ಶಾಶ್ವತವಾಗಿ ಇರಬೇಕು ಎಂದು ಹಂಬಲಿಸುತ್ತಿರುತ್ತದೆ. ಅದು ಸಿಗದಿದ್ದಾಗ ದುಖಿತವಾಗುತ್ತದೆ.ನಿರಾಶೆಯಾಗುತ್ತದೆ. ಬುದ್ಧ ಹೇಳಿದ ಮಾತು ಈ ಕ್ಷಣ ಶಾಶ್ವತವಾಗಿ ಇರಲ್ಲ ಅಂತ ಅರಿವಿನ ಪರದೆಗೆ ತಂದು ಕೊಂಡರೆ ಸುಖ ಶಾಶ್ವತ ಇರಲ್ಲ ಅದು ಸರಿದು ಹೋಗುತ್ತದೆ, ಅದನ್ನು ಪದೇ ಪದೇ ಬಯಸುವುದು, ಬಯಸಿದರೂ ಸಿಗುವುದು ಅಸಾಧ್ಯವೆಂದಾದಾಗ ಸುಖದ ನಶೆ ನೆತ್ತಿಗೆರುವುದಿಲ್ಲ.
ಅದೇ ದುಃಖ ಬಂದಾಗ ಇದು ಕೂಡ ಸರಿದುಹೋಗುತ್ತದೆ ಎಂದು ನೆನಪಿಟ್ಟುಕೊಂಡಾಗ ನೋವಾಗುವುದಿಲ್ಲ. ಏನಿದೆಯೊ ಅದು ಇದೆ ಅಷ್ಟೇ; ಏನಿಲ್ಲವೊ ಅದು ಇಲ್ಲ ಅಷ್ಟೇ.. ಇದೆ ಬಗೆಯ ಸ್ಥಿತಪ್ರಜ್ಞತೆ ಕೃಷ್ಣ ಹೇಳ್ತಾನೆ. ಎಲ್ಲ ಸನ್ನಿವೇಶಗಳಲ್ಲೂ ಸಾಕ್ಷಿಭೂತನಾಗಿರುವುದು. ಕೆಸರಿನೊಳಗಿದ್ದು ನಿರ್ಮಲವಾಗಿರುವ ಕಮಲದಂತೆ ನಾವಿರಬೇಕಿದೆ. ಸುಖವೂ ನಿನ್ನದೆ, ದುಃಖವೂ ನಿನ್ನದೆ ಅನ್ನೋ ಭಾವ, ಸುಖ ಕೊಟ್ಟಾಗ ಪ್ರಸಾದವೆನ್ನುವಂತೆ ದುಃಖ ಕೊಟ್ಟಾಗಲೂ ಪ್ರಸಾದವೆನ್ನುವ ಭಾವ ಸ್ಥಾಯಿಯಾಗಬೇಕಿದೆ.
ಒತ್ತಡ ಒತ್ತಡವನ್ನಾಗಿ ನಮ್ಮ ಕಾಡ ಬಿಡದೆ ನಿರ್ವಹಿಸುವ ಕಲೆ ಕಲಿಯೋಣ. ಇಷ್ಟು ಬುದ್ಧಿ ಬೆಳೆದ ಮೇಲೂ ಈ ಬುದ್ಧಿಯ ವಾಸ್ತವ ಅರೆಯುವ ಧಂದೆಗೆ ಹಚ್ಚದಿದ್ದರೆ ಹೇಗೆ? ಶಾಂತರಾಗೋಣ; ಪ್ರಶಾಂತರಾಗೋಣ. ನಿರ್ಮಲ ಚಿತ್ತರಾಗೋಣ. ಭವದ ಬೀಜವಾದ ನಾವು ನಮ್ಮ ಬದುಕಿನ ಸಾಧ್ಯತೆಗಳನ್ನು ಪೂರ್ಣವಾಗಿ ಅರಳಲು ಬಿಡೋಣ. ಚಂದವಾಗಿ ಬದುಕೋಣ.
ನೀವು ಬರೆಯಿರಿ: kknewsonline@gmail.com
















