Home ನಿಮ್ಮ ಜಿಲ್ಲೆ ಬೀದರ ನಗರ ಸಭೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಸಚಿವ

ನಗರ ಸಭೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಸಚಿವ

ಬೀದರ: ನಗರ ಸಭೆಯಿಂದ ಜನ್ಮದಿನದ ದಾಖಲಾತಿ ನೀಡಲು 200 ರೂ. ಪಡೆಯುತ್ತಿದ್ದಾರೆ ಎಂದು ಬೀದರ ನಗರಸಭೆಯ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ.

ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ದೂರುಗಳು ಬಾರದಂತೆ ನೋಡಿಕೊಳ್ಳಬೇಕು ಎಂದು ಪೌರಾಯುಕ್ತರು ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಚಿವರು ನಿರ್ದೇಶನ ನೀಡಿದರು.

ಟೆಂಡರ್ ಆಗಿ ವರ್ಷ ಕಳೆದರೂ ನಗರೋತ್ಥಾನ ಮೂರನೇ ಹಂತದ ಕಾಮಗಾರಿಗಳು ಇದುವರೆಗೆ ಆರಂಭಗವಾಗಿಲ್ಲ ಎಂದು ನಗರಸಭೆಯ 14ನೇ ವಾರ್ಡನ ದೀಪಕ್ ಅವರು ಸಚಿವರಿಗೆ ತಿಳಿಸಿದರು. ಈ ಟೆಂಡರ್‍ನ್ನು ಬೇರೊಬ್ಬರಿಗಿ ವಹಿಸಿ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು ಎಂದು ಸಚಿವರು ಪೌರಾಯುಕ್ತರಿಗೆ ಸೂಚಿಸಿದರು.

ಮುಲ್ತಾನಿ ಕಾಲೋನಿಯ ವ್ಯಕ್ತಿಯೊಬ್ಬರು ನಿವೇಶನ ಸಂಬಂಧ ಸಾಕಷ್ಟು ದಿನಗಳಿಂದ ಅಲೆಯುತ್ತಿದ್ದೇನೆ. ಯಾರೂ ಕೂಡ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಸಚಿವರಿಗೆ ತಿಳಿಸಿದಾಗ, ಕಚೇರಿಗೆ ಬರುವ ಅರ್ಜಿಗಳಲ್ಲಿ ಅರ್ಹವಾಗಿದ್ದಲ್ಲಿ ಕೆಲಸ ಮಾಡಿ, ಅನರ್ಹವಿದ್ದಲ್ಲಿ ತಿರಸ್ಕರಿಸಬೇಕು. ವಿನಾಕಾರಣ ಜನರು ಅಲೆಯುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ತಿಳಿಸಿದರು.

ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಹಾಜರಾತಿ ಪುಸ್ತಕ ಪಡೆದು ಹಾಜರಾತಿ ಪರಿಶೀಲಿಸಿದರು.  ಕಚೇರಿಯ ಜೂನಿಯರ್ ಹೆಲ್ತ್ ಇನ್ಸ್‍ಪೆಕ್ಟರ್ ಒಬ್ಬರು ದೀರ್ಘಾವಧಿ ರಜೆಯಲ್ಲಿರುವುದನ್ನು ಗಮನಿಸಿ, ಯಾಕೆ ಇವರು ಸಾಕಷ್ಟು ದಿನಗಳಿಂದ ಗೈರಾಗುತ್ತಿದ್ದಾರೆ ಎಂದು ಪೌರಾಯುಕ್ತರಿಂದ ವಿವರಣೆ ಕೇಳಿದರು. ಗೈರು ಹಾಜರಾದ ಜೂನಿಯರ್ ಹೆಲ್ತ್ ಇನ್ಸ್‍ಪೆಕ್ಟರ್ ಅವರಿಗೆ ನೋಟಿಸ್ ನೀಡಬೇಕು. ನೊಟೀಸ್‍ಗೆ ಸ್ಪಂದಿಸದಿದ್ದಲ್ಲಿ ಅಮಾನತುಗೊಳಿಸಲು ಕ್ರಮ ವಹಿಸಬೇಕು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರಸಭೆಯ ಆವರಣದಲ್ಲಿ ಸಂಗ್ರಹಿಸಲಾಗಿದ್ದ ಕಸ ಹಾಕುವ ಬುಟ್ಟಿಗಳನ್ನು ಕಂಡು ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡ ಸಚಿವರು, ಜನರಿಗೆ ವಿತರಿಸಬೇಕಾದ ಬುಟ್ಟಿಗಳನ್ನು ವಿತರಿಸದೇ ಯಾಕೆ ಸಂಗ್ರಹಿಸಿಟ್ಟಿದ್ದೀರಿ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು. ಇದಕ್ಕೆ ನಗರಸಭೆಯ ಪೌರಾಯುಕ್ತರು ಪ್ರತಿಕ್ರಿಯಿಸಿ, ನಗರದಾದ್ಯಂತ ಕುಟುಂಬಗಳಿಗೆ ಕಸದ ಬುಟ್ಟಿಗಳನ್ನು ವಿತರಿಸಲಾಗಿದೆ. ಬಾಕಿ ಉಳಿದ ಬುಟ್ಟಿಗಳನ್ನು ಇಡಲಾಗಿದೆ ಎಂದು ತಿಳಿಸಿದಾಗ, ಕೂಡಲೇ ಎಲ್ಲಾ ಕಸ ಹಾಕುವ ಬುಟ್ಟಿಗಳನ್ನು ಜನರಿಗೆ ತಲುಪಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ವಿಕಲಚೇತನರ ಸಮಸ್ಯೆಗೆ ಸ್ಪಂದನೆ: ನಗರಸಭೆಗೆ ಭೇಟಿ ನೀಡಿದ ವೇಳೆಯಲ್ಲಿ ವಿಕಲಚೇತನರು ಸಚಿವರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ನಗರಸಭೆಯಿಂದ ವಿಕಲಚೇತನರಿಗಾಗಿ ಸಾಕಷ್ಟು ಯೋಜನೆಗಳಿವೆ. ಇವು ಎಲ್ಲರಿಗೂ ತಲುಪುತ್ತಿಲ್ಲ. ಎರಡು ಕಡೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ತಿಳಿಸಿದಾಗ, ಸಚಿವರು ಆ ಸಿಬ್ಬಂದಿಯ ಹೆಚ್ಚುವರಿ ಪ್ರಭಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಪೌರಾಯುಕ್ತರಿಗೆ ಸೂಚಿಸಿದರು.

ವಿಕಲಚೇತನರಿಗಾಗಿ ಪ್ರತಿ ತಿಂಗಳು ಜನಸ್ಪಂದನ ಕಾರ್ಯಕ್ರಮ ಆಗಬೇಕು ಎಂದು ಇದೆ ವೇಳೆ ವಿಕಲಚೇತನರು ಸಚಿವರಲ್ಲಿ ಮನವಿ ಮಾಡಿದರು. ವಿಕಲಚೇತನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಅವರ ಕೆಲಸಗಳನ್ನು ಶೀಘ್ರ ಮಾಡಿಕೊಡಬೇಕು ಎಂದು ಸಚಿವರು ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಿದರು.

ಇಂದಿರಾ ಕ್ಯಾಂಟೀನ್‍ಗೆ ಭೇಟಿ:
ನಗರಸಭೆಯ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‍ಗೆ ಭೇಟಿ ನೀಡಿದ ಸಚಿವರು ಅಲ್ಲಿ ಊಟ ಮಾಡುತ್ತಿದ್ದ ಜನರಿಗೆ ಮಾತನಾಡಿಸಿ ಅಡುಗೆ ಚೆನ್ನಾಗಿದೆಯಾ ಎಂದು ಕೇಳಿದರು. ಶುದ್ಧ ಕುಡಿಯುವ ನೀರಿನ ಘಟಕ ಇದೆಯಾ? ಎಂದು ಕೇಳಿದರು. ಶುದ್ದ ಕುಡಿಯುವ ನೀರಿನ ಘಟಕ ಕೆಲವು ದಿನಗಳ ಹಿಂದೆ ಕೆಟ್ಟುಹೋಗಿದೆ. ಸರಿಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

 

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…