Home ನಿಮ್ಮ ಜಿಲ್ಲೆ ಬೀದರ ಜಿಲ್ಲೆಯಲ್ಲಿ ಯಾರು ಕೂಡ ಹಸಿವಿನಿಂದ ಬಳಲಬಾರದು: ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಯಾರು ಕೂಡ ಹಸಿವಿನಿಂದ ಬಳಲಬಾರದು: ಜಿಲ್ಲಾಧಿಕಾರಿ

ಬೀದರ: ಲಾಕ್ ಡೌನ್ ಆದೇಶ ಪಾಲನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ನಿರಾಶ್ರಿತರು ಮತ್ತು ಕಡುಬಡವರಿಗೆ ಆಹಾರ ಮತ್ತು ಆಹಾರಧಾನ್ಯ ಸರಬರಾಜು ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಈ ವೇಳೆ ಯಾರು ಕೂಡ ಯಾವುದೇ ಕಾರಣಕ್ಕೂ ಉಪವಾಸ ಇರಬಾರದು. ಇದಕ್ಕೆ ಅಧಿಕಾರಿಗಳು ಅವಕಾಶ ಮಾಡಿಕೊಡಬಾರದು ಎಂದು ಜಿಲ್ಲಾಧಿಕಾರಿ ಡಾ. ಹೆಚ್.ಆರ್.ಮಹಾದೇವ್ ಹೇಳಿದರು.

ಏ. 12ರಂದು ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಕೆಲವು ಬಡವರಿಗೆ ಎಪಿಎಲ್ ಕಾರ್ಡ ಕೂಡ ಇಲ್ಲ. ಅಂತವರಿಗೆ ಅವಶ್ಯಕತೆ ಇದ್ದರೆ ಆಹಾರಧಾನ್ಯ ವಿತರಿಸಲು ಎಲ್ಲಾ ತಾಲೂಕುಗಳಲ್ಲಿ ವ್ಯವಸ್ಥೆ ಮಾಡಬೇಕು ಎಂದು ಇದೆ ವೇಳೆ ಡಿಸಿ ಅವರು ತಿಳಿಸಿದರು.

ಈಗಾಗಲೇ ಜಿಲ್ಲೆಯಲ್ಲಿನ ನಿರಾಶ್ರಿತರು, ಕಡುಬಡವರಿಗೆ ಆಹಾರ ಮತ್ತು ಆಹಾರ ಧಾನ್ಯಗಳ ಪೂರೈಕೆ ನಡೆಯುತ್ತಿದೆ. ಇದು ಎಲ್ಲಾ ಕೆಲವೆಡೆಗಳಲ್ಲಿ ಸುವ್ಯವಸ್ಥಿತವಾಗಿ ನಡೆಯಬೇಕು. ರಸ್ತೆ ಬದಿ, ಅಲೆಮಾರಿಗಳು, ನಿರಾಶ್ರಿತರು ಹೀಗೆ ಯಾರು ಎಲ್ಲೇ ಇದ್ದರೂ ಅವರಿಗೆ ನಾವು ಈ ವೇಳೆ ಆಹಾರ ಕೊಡಬೇಕು.
ಆಹಾರಧಾನ್ಯ ಇಲ್ಲ ಎಂದು ಕೆಲವರು ಹೇಳಿಕೊಳ್ಳಲು ಕೂಡ ಹಿಂಜರಿಯುತ್ತಾರೆ. ಅಂತವರನ್ನು ಗುರುತಿಸಿ ಅವರಿಗೆ ಆಹಾರಧಾನ್ಯ ವಿತರಿಸುವ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ತಾಲೂಕುಮಟ್ಟದ ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಆಹಾರ ಧಾನ್ಯ ವಿತರಣೆ ಕಾರ್ಯ ನಡೆಯುತ್ತಲೇ ಇದೆ. ಆಹಾರ ಧಾನ್ಯ ಬೇಕು ಎನ್ನುವ ಕುಟುಂಬಗಳಿಗೆ ತಲಾ ಒಂದು ಕೆ.ಜಿ. ಅಡುಗೆ ಎಣ್ಣೆ, ಎರಡು ಕೆ.ಜಿ. ಬೇಳೆ ಮತ್ತು ಆಯಾ ಕುಟುಂಬದಲ್ಲಿನ ತಲಾ ಒಬ್ಬರಿಗೆ 10 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ ಎಂದು ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ
ಶರಣಬಸಪ್ಪ ತಿಳಿಸಿದರು.

ನಾವು ನಮ್ಮಲ್ಲಿ ಪಟ್ಟಿ ಮಾಡಿ ಆಹಾರಧಾನ್ಯ ಕೊಡುತ್ತಿದ್ದೇವೆ. ಹಾಲು ವಿತರಿಸುತ್ತಿದ್ದೇವೆ. ಇಲ್ಲಿವರೆಗೆ ಬೇಡಿಕೆ ಬಂದ ಎಲ್ಲರಿಗೂ ಆಹಾರ ಧಾನ್ಯ ನೀಡಿದ್ದೇವೆ ಎಂದು ಬಸವಕಲ್ಯಾಣ ಸಿಎಂಸಿ ಕಮಿಷನರ್ ಮೀನಾಕ್ಷಿ ಬೋರಾಳಕರ ಹೇಳಿದರು.
ಬೀದರನಲ್ಲಿ ಕೂಡ ಇದುವರೆಗೆ ಆಹಾರಧಾನ್ಯಗಳನ್ನು ಕೇಳಿದ ಎಲ್ಲ ಕುಟುಂಬಗಳಿಗೆ ಆಹಾರಧಾನ್ಯ ನೀಡಿದ್ದೇವೆ ಎಂದು ತಹಸೀಲ್ದಾರ ಕೀರ್ತಿ ಚಾಲಕ ಮಾಹಿತಿ ನೀಡಿದರು.
ನಮ್ಮಲ್ಲಿ ಕೂಡ ಆಹಾರಧಾನ್ಯಗಳನ್ನು ಕೇಳಿದ ಎಲ್ಲರಿಗೂ ವಿತರಿಸಿ, ತಾಲೂಕಾಡಳಿತಿಂದ ಸ್ಪಂದಿಸಲಾಗಿದೆ ಎಂದು ಔರಾದ್ ತಹಸೀಲ್ದಾರ ತಿಳಿಸಿದರು.

 

Date: 12-04-2020 Time:5:40PM

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…