ಜಾನುವಾರುಗಳಿಗೆ ಉಚಿತ ವಿಮೆ ಸೌಲಭ್ಯ
50 ಸಾವಿರ ರೂ.ವರೆಗೆ ವಿಮಾ ಮೊತ್ತ

- ದುರ್ಯೋಧನ ಹೂಗಾರ (ಕಸ್ತೂರಿ ಕಿರಣ ಪತ್ರಿಕೆಯ ಸುದ್ದಿ ಮುಖ್ಯಸ್ಥರು)
ಬೀದರ- ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಪರಿಶಿಷ್ಟ ಜಾತಿ, ಪಂಗಡದ ರೈತ ಫಲಾನುಭವಿಗಳಿಗೆ ಸೇರಿದಜಾನುವಾರುಗಳಿಗೆ ಸರ್ಕಾರದಿಂದ ಉಚಿತ ವಿಮೆ ಮಾಡಿಸುವ ಕಾರ್ಯ ಶುರುವಾಗಿದ್ದು, ಯೋಜನೆಯ ಲಾಭ ಅರ್ಹ ಫಲಾನುಭವಿಗಳು ಪಡೆಯಬಹುದಾಗಿದೆ.
2018-19ನೇ ಸಾಲಿನ ಹಾಲು ಉತ್ಪಾದಕರಿಗೆ ನೀಡುವ ಉತ್ತೇಜನದ, ವಿಶೇಷ ಘಟಕ ಹಾಗೂ ಗಿರಿಜನ ಉಪ ಯೋಜನೆಯ ಉಳಿಕೆ ಹಣದಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಒಳಗೊಂಡಂತೆ ಈ ಉಚಿತ ವಿಮಾ ಸೌಲಭ್ಯವನ್ನು ಜಾರಿಗೊಳಿಸಲಾಗಿದೆ. ಸರಕಾರದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಆಯುಕ್ತರ ಕಚೇರಿಯಿಂದ ಸುತ್ತೋಲೆ ಹೊರಡಿಸಲಾಗಿದ್ದು, ಈಗಾಗಲೇ ವಿಮೆ ಮಾಡಿಸು ಕಾರ್ಯ ಕೂಡ ಶುರುವಾಗಿದೆ.
ಈವರೆಗೂ ಪರಿಶಿಷ್ಟ ಜಾತಿ, ಪಂಗಡದಲ್ಲಿನ ಕುಟುಂಬಗಳಲ್ಲಿರುವ ಜಾನುವಾರುಗಳಿಗೆ ವಿಮೆ ಮಾಡಿಸಬೇಕಾದರೆ ಪಾವತಿಸಬೇಕಾದ ಪ್ರಿಮಿಯಂ ಮೊತ್ತದ ಪೈಕಿ ಸರಕಾರ ಶೇ.70ರಷ್ಟು ಪಾವತಿಸಿದರೆ, ಫಲಾನುಭವಿ ಶೇ.30ರಷ್ಟು ಪಾವತಿಸಬೇಕಾಗಿತ್ತು. ಆದರೆ ಇದೀಗ ಫಲಾನುಭವಿಗಳು ಒಂದು ಪೈಸೆಯನ್ನು ಪಾವತಿಸಬೇಕಾಗಿಲ್ಲ. ಸರಕಾರವೇ ಸಂಪೂರ್ಣ ಪ್ರಿಮಿಯಂ ಹಣವನ್ನು ಪಾವತಿಸಲಿದ್ದು, ಫಲಾನುಭವಿಗಳಿಗೆ ಉತ್ತಮ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ.
ಆಯ್ಕೆ ಹೇಗೆ : ಆಯ್ಕೆ ಸಮಿತಿಗೆ ಅರ್ಹವಾದ ಕುಟುಂಬಗಳಲ್ಲಿನ ಜಾನುವಾರುಗಳ ವಿವರವನ್ನು ಪಶು ಸಂಗೋಪನಾ ಇಲಾಖೆಯ ಪಶುವೈದರ ಮೂಲಕ ಗುರುತಿಸಿ, ಸಹಾಯಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಶಿಫಾರಸು ಮಾಡಬೇಕಾಗಿದೆ ಎಂಬುದಾಗಿ ಸರಕಾರದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಪರಿಶಿಷ್ಟ ಜಾತಿ, ಪಂಗಡದ ರೈತರ ಜಾನುವಾರುಗಳು ಉಚಿತ ವಿಮೆ ವ್ಯಾಪ್ತಿಗೆ ಒಳಪಡಲಿದ್ದು, ಒಂದು ವೇಳೆ ಅವು ಆಕಸ್ಮಿಕವಾಗಿ ಮೃತಪಟ್ಟರೆ ಗರಿಷ್ಠ 50 ಸಾವಿರ ರೂ.ವರೆಗೆ ವಿಮಾ ಮೊತ್ತ ಪಾಲಕನ ಕೈಗೆ ದೊರೆಯಲಿದೆ. ಯುನೈಟೆಡ್ ಇಂಡಿಯಾ ಕಂಪನಿಗೆ ಈ ವಿಮೆಯ ಹೊಣೆಗಾರಿಕೆಯನ್ನು ನೀಡಲಾಗಿದೆ.
ಪೂರ್ಣ ವಿಮೆ ವಿವರ : ಫಲಾನುಭವಿಗಳ ರಾಸುಗಳ ಗರಿಷ್ಟ 50 ಸಾವಿರ ಮೊತ್ತಕ್ಕೆ ಶೇ. 5.7ರಷ್ಟು ವಿಮಾ ಪ್ರೀಮಿಯಂ ಮೊತ್ತವನ್ನು ಪೂರ್ಣವಾಗಿ ಸಹಾಯಧನದ ಮೂಲಕ ಭರಿಸಲಾಗುತ್ತಿದೆ. ಅದೇರೀತಿ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಜಾನುವಾರು ಮಿಷನ್ ಅಡಿಯಲ್ಲಿ ಜಾನುವಾರುಗಳ ಒಂದು ವರ್ಷದ ವಿಮೆಗಾಗಿ ಶೇ.2ರಷ್ಟು ಪ್ರೀಮಿಯಂ ದರದಲ್ಲಿ, ಬಿಪಿಎಲ್ ಪ.ಜಾ ಮತ್ತು ಪ.ಪಂದ ಫಲಾನುಭವಿಗಳಿಗೆ ಶೇ.70ರಷ್ಟು ಸಹಾಯಧನ ಮತ್ತು ಎಪಿಎಲ್ ಫಲಾನುಭವಿಗಳಿಗೆ ಶೇ.50ರಷ್ಟು ಸಹಾಯಧನ ಮತ್ತು ಹಾಲು ಒಕ್ಕೂಟಗಳಿಂದ ಭರಿಸುವುದರೊಂದಿಗೆ ಯೋಜನೆ ಅನುಷ್ಟಾನಗೊಳಿಸಲಗುತ್ತಿದೆ.
ಯಾವ ಜಾನುವಾರುಗಳಿಗೆ ವಿಮೆ: ವಿಮೆ ವ್ಯಾಪ್ತಿಗೆ ಇಷ್ಟ ಬಂದ ಜಾನುವಾರುಗಳನ್ನು ಸೇರಿಸುವಂತಿಲ್ಲ. ಹೋರಿ, ಎತ್ತು, ಕೋಣ ಹಾಗೂ ಹೈನುಗಾರಿಕೆಗೆ ಯೋಗ್ಯವಾದ 1 ವರ್ಷ ಮೇಲ್ಪಟ್ಟು 8 ವರ್ಷದೊಳಗಿನ ಮಣಕ, ಆಕಳು, ಎಮ್ಮೆಗಳನ್ನು ಒಟ್ಟಾರೆ ಮೂರು ವರ್ಷದ ವಿಮೆ ಯೋಜನೆಗೆ ಒಳಪಡಿಸಬಹುದಾಗಿದೆ. ವಿಮೆಗೆ ಒಳಪಡುವ ಜಾನುವಾರುವನ್ನು ಅವುಗಳ ಗುಣ ಚರ್ಯೆಗಳನ್ನು ದಾಖಲಿಸಿಕೊಂಡು, ಅದಕ್ಕೆ ಪೂರಕವಾಗಿ ಜಾನುವಾರುಗಳ ಕಿವಿಗೆ ಟ್ಯಾಗ್ ಅಳವಡಿಸಲಾಗುತ್ತದೆ.
ಎಷ್ಟು ಮೊತ್ತ? : ರೈತರ ಜಾನುವಾರುಗಳ ಮಾರುಕಟ್ಟೆ ಮೌಲ್ಯ 50 ಸಾವಿರ ರೂ. ಆಗಿದ್ದರೆ ಆ ಪೈಕಿ ಶೇ.5.7ರಷ್ಟು (2850 ರೂ.) ಹಣವನ್ನು ಪ್ರಿಮಿಯಂ ರೂಪದಲ್ಲಿ ಮೂರು ವರ್ಷದ ಒಟ್ಟಾರೆ ಅವಧಿಗೆ ಸರಕಾರ ಪಾವತಿಸಲಿದೆ. ಈ ಮೂರು ವರ್ಷದೊಳಗೆ ವಿಮೆ ವ್ಯಾಪ್ತಿಗೆ ಒಳಪಟ್ಟ ಜಾನುವಾರು ಮೃತಪಟ್ಟರೆ, ವಿಮೆ ಹಣಕ್ಕಾಗಿ ಅರ್ಜಿ ಸಲ್ಲಿಸಿ, ಪಾಲಕರು ವಿಮೆ ಕಂಪನಿಯಿಂದ ಪಡೆದುಕೊಳ್ಳಬಹುದಾಗಿದೆ.ಒಬ್ಬ ರೈತ 5 ಜಾನುವಾರುಗಳಿಗೆ ವಿಮೆ ಮಾಡಿಸಬಹುದಾಗಿದೆ.

ಡಾ| ಗೌತಮ ಅರಳಿ ಉಪನಿರ್ದೇಶಕರು ಪಾಶುಪಾಲನಾ ಮತ್ತು ಪಶುವೈದ್ಯ ಇಲಾಖೆ ಬೀದರ್
ಬೀದರ ಜಿಲ್ಲೆಯಲ್ಲಿ ಈ ವರೆಗೆ 90.14 ಲಕ್ಷ ಮೊತ್ತದಲ್ಲಿ ಫಲಾನುಭವಿಗಳ ಜಾನುವಾರುಗಳಿಗೆ ವಿಮೆ ಮಾಡಿಸಲಾಗಿದೆ. ಬೀದರ ಜಿಲ್ಲೆಯಲ್ಲಿ 2,163 ಫಲಾನುಭವಿಗಳ ಒಟ್ಟಾರೆ, 3,232 ರಾಸುಗಳಿಗೆ ವಿಮೆ ಮಾಡಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡದಲ್ಲಿನ ನಿಗದಿತ ಜಾನುವಾರುಗಳಿಗೆ ಉಚಿತ ವಿಮೆ ಸೌಲಭ್ಯ ಒದಗಿಸಲು ಸರಕಾರ ಮಾರ್ಗಸೂಚಿಗಳನ್ನು ನೀಡಿ, ಸುತ್ತೋಲೆ ಹೊರಡಿಸಿದ್ದು, ಈ ಬಗೆಗಿನ ಮತ್ತಷ್ಟು ವಿವರಗಳಿಗೆ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹುದು.
Publish Date:07-11-2019
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















