ಕಲಬುರಗಿ: ವಿದ್ಯುತ್ ಅವಘಡಗಳಿಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಿ
ಮುನ್ನೆಚ್ಚರಿಕೆ ಇದ್ದರೆ ಅವಘಡ ತಪ್ಪಿಸಲು ಸಾಧ್ಯ
*ಮುನ್ನೆಚ್ಚರಿಕೆ ವಹಿಸಿ; ವಿದ್ಯುತ್ ಅವಘಡ ತಪ್ಪಿಸಿ*
*ಮಳೆಗಾಲ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುರಕ್ಷತಾ ಕ್ರಮಗಳನ್ನು ಸೂಚಿಸಿದ ಜೆಸ್ಕಾಂ*
*ಕಲಬುರಗಿ, ಮೇ 31, 2024:* ಮಳೆಗಾಲದಲ್ಲಿ ಸಂಭವಿಸಬಹುದಾದ ವಿದ್ಯುತ್ ದುರಂತಗಳನ್ನು ತಪ್ಪಿಸುವ ಉದ್ದೇಶದಿಂದ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ಸುರಕ್ಷತಾ ಕ್ರಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದೆ.
ನಿರ್ಲಕ್ಷ್ಯ ಮತ್ತು ನಿಯಮಗಳನ್ನು ಪಾಲಿಸದಿರುವುದರಿಂದ ಮಳೆಗಾಲಕ್ಕೆ ಮುನ್ನವೇ ಪೂರ್ವ ಮುಂಗಾರು ಮಳೆ ಸಂದರ್ಭದಲ್ಲಿ ವಿದ್ಯುತ್ ಅವಘಡಗಳಿಗೆ ಪ್ರಾಣಿಗಳು ಮತ್ತು ಮನುಷ್ಯರು ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು ಮತ್ತು ಅಗತ್ಯ ಮುನ್ನೆಚ್ಚರಿಕಾ ಕ್ರಮ ಅನುಸರಿಸಬೇಕು ಎಂದು ಜೆಸ್ಕಾಂ ಮನವಿ ಮಾಡಿದೆ.
ಈ ಕುರಿತು ಪ್ರಕಟಣೆ ಹೊರಡಿಸಿ, ವಿದ್ಯುತ್ ಕಂಬಗಳಿಗೆ ಬ್ಯಾನರ್ ಅಥವಾ ಜಾಹೀರಾತು ಫಲಕಗಳನ್ನು ಕಟ್ಟುವುದು, ತುಂಡಾಗಿ ಬಿದ್ದ ವಿದ್ಯುತ್ ತಂತಿಗಳನ್ನು ಮುಟ್ಟುವುದು, ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ರೆಂಬೆಗಳನ್ನು ತೆಗೆಯಲು ಪ್ರಯತ್ನಿಸುವುದು, ವಿದ್ಯುತ್ ಕಂಬಗಳಿಗೆ ಪ್ರಾಣಿಗಳನ್ನು ಕಟ್ಟುವುದರಿಂದ ಈ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಕೆಲವು ನಿರ್ದೇಶನಗಳನ್ನು ಪಾಲಿಸುವಂತೆ ಕೋರಿದೆ.
*ಮುಂಜಾಗ್ರತಾ ಕ್ರಮಗಳು*
* ವಿದ್ಯುತ್ ಸುರಕ್ಷತೆ ಬಗ್ಗೆ ಪಾಲಕರು ತಿಳಿದುಕೊಂಡು, ಮಕ್ಕಳಿಗೆ ವಿದ್ಯುತ್ ಸುರಕ್ಷತೆ ಬಗ್ಗೆ ತಿಳಿಹೇಳಿ ಅವುಗಳನ್ನು ತಪ್ಪದೆ ಪಾಲಿಸುವಂತೆ ತಿಳಿಸಬೇಕು.
* ಶಾಲಾ ಮಕ್ಕಳಲ್ಲಿ ವಿದ್ಯುತ್ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮುಖ್ಯ ಗುರುಗಳು/ ಶಿಕ್ಷಕರು ಶಾಲೆಯಲ್ಲಿ ಆಗಾಗ ಹಮ್ಮಿಕೊಳ್ಳಬೇಕು.
* ವಿದ್ಯುತ್ ಕಂಬಗಳಿಗೆ ಜಾನುವಾರುಗಳನ್ನು ಕಟ್ಟಬೇಡಿ. ವಿದ್ಯುತ್ ತಂತಿಯಲ್ಲಿ ಬಟ್ಟೆ ಒಣಗಿಸುವ ಕೆಲಸ ಮಾಡಬೇಡಿ.
* ಗುಡುಗು, ಮಿಂಚು ಹಾಗೂ ಭಾರಿ ಗಾಳಿಯ ಸಮಯದಲ್ಲಿ ವಿದ್ಯುತ್ ಕಂಬ ಅಥವಾ ತಂತಿಯ ಕೆಳಗೆ ನಿಲ್ಲದಿರಿ ಮತ್ತು ಮನೆಯಲ್ಲಿ ಟಿವಿ, ಫ್ರಿಜ್, ಇನ್ ವರ್ಟರ್ ಕನೆಕ್ಷನ್ ಮೊದಲೇ ತಪ್ಪಿಸಿ.
* ವಿದ್ಯುತ್ ಕಂಬಗಳನ್ನು ಹತ್ತಬೇಡಿ ಮತ್ತು ಅವುಗಳಿಗೆ ಬ್ಯಾನರ್ ಗಳು ಅಥವಾ ಪ್ರಚಾರ ಸಾಮಗ್ರಿಗಳನ್ನು ಕಟ್ಟಬೇಡಿ.
* ಕೊಕ್ಕೆ ಹಾಕುವ ಮೂಲಕ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬೇಡಿ. ಇದು ಶಿಕ್ಷಾರ್ಹ ಅಪರಾಧ.
* ಯಾವಾಗಲೂ ಐಎಸ್‌ಐ ಚಿಹ್ನೆಯುಳ್ಳ ಮತ್ತು ಅನುಮೋದಿತ ಗುಣಮಟ್ಟದ ತಂತಿ, ಕೇಬಲ್ ಗಳನ್ನು ಬಳಸಿ.
* ಮಕ್ಕಳ ಕೈಗೆಟಕಬಹುದಾದ ಸ್ಥಳಗಳಲ್ಲಿ ಸ್ವಿಚ್ ಬೋರ್ಡ್ ಗಳನ್ನು ಸ್ಥಾಪಿಸಬೇಡಿ, ಮಕ್ಕಳಿಗೆ ಪ್ಲಗ್ ಗಳು ಮತ್ತು ಸಾಕೆಟ್ ಗಳೊಂದಿಗೆ ಆಟವಾಡಲು ಬಡಬೇಡಿ.
* ಸರ್ಕ್ಯೂಟ್ ಅನ್ನು ಹೆಚ್ಚು ಲೋಡ್ ಮಾಡಬೇಡಿ. ಸರ್ಕಾರದಿಂದ ವಿದ್ಯುತ್ ಪರವಾನಗಿ ಪಡೆದಿರುವ ಗುತ್ತಿಗೆದಾರರಿಂದ ಮಾತ್ರ ವೈರಿಂಗ್ ಮಾಡಿಸಿ.
* ಮೂರು ಪಿನ್ ಸಾಕೆಟ್ ಮಾತ್ರ ಉಪಯೋಗಿಸಿ.
* ವಿದ್ಯುತ್ ಅವಘಡ ತಡೆಯಲು ಅರ್ಥ್ ಲೀಕೇಜ್ ಸರ್ಕ್ಯೂಟ್ ಬ್ರೇಕರ್ ಅಳವಡಿಸಿ.
* ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ರೆಂಬೆಗಳನ್ನು ತೆಗೆಯಲು ಪ್ರಯತ್ನಿಸಬೇಡಿ, ಜೆಸ್ಕಾಂ ಸಹಾಯವಾಣಿಗೆ ಸಂಪರ್ಕಿಸಿ .
* ತುಂಡಾಗಿ ಬಿದ್ದ ತಂತಿಗಳನ್ನು ಮತ್ತು ಇನ್ಸುಲೇಪನ ಕಳಚಿದ ವೈರಗಳನ್ನು ಮುಟ್ಟಬೇಡಿ. ಈ ಬಗ್ಗೆ ಜೆಸ್ಕಾಂನ ಸಹಾವಾಣಿ ಸಂಖ್ಯೆ 1912 ಕ್ಕೆ ಕರೆ ಮಾಡಿ.
* ಹೆಚ್ಚಿನ ಮಾಹಿತಿಗಾಗಿ gescom.karnataka.gov.in ಗೆ ಭೇಟಿ ನೀಡಿ.
*ಕೋಟ್*
ಸಾರ್ವಜನಿಕರ ಸಹಕಾರ ಇದ್ದರೆ ಮಾತ್ರ ಸಮರ್ಪಕ ವಿದ್ಯುತ್ ಪೂರೈಕೆ ಮತ್ತು ವಿದ್ಯುತ್ ಅವಘಡಗಳನ್ನು ತಪ್ಪಿಸಲು ಸಾಧ್ಯ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೆ ಪಾಲಿಸಿ ಜೆಸ್ಕಾಂ ಜತೆ ಸಹಕರಿಸಿ.
ರವೀಂದ್ರ ಕರಲಿಂಗಣ್ಣವರ್
ವ್ಯವಸ್ಥಾಪಕ ನಿರ್ದೇಶಕರು, ಜೆಸ್ಕಾಂ, ಕಲಬುರಗಿ
ಬೆಳಗಾವಿ ಪರೀಕ್ಷೆ ಮುಗಿದ ಮೂರು ಗಂಟೆಯಲ್ಲಿ ರಿಜಲ್ಟ್..!!
ಪರೀಕ್ಷೆ ಮುಗಿದ ಮೂರು ಗಂಟೆಯಲ್ಲಿ ಫಲಿತಾಂಶ ಪ್ರಕಟಿಸಿ ದಾಖಲೆ ಮಾಡಿದ ವಿಟಿಯೂ …


















