ಸಿದ್ರಾಮಯ್ಯ ಕನಸು ಏನೀತ್ತು ಗೊತ್ತಾ ?
ಬಯಲುಸೀಮೆಗೆ ವರದಾನವಾಗಬೇಕಿದ್ದ ಮಿಲ್ಕ್ ಶೆಡ್ ಯೋಜನೆ ಠುಸ್..!
- ದುರ್ಯೋಧನ ಹೂಗಾರ (ಕಸ್ತೂರಿ ಕಿರಣ ಪತ್ರಿಕೆಯ ಸುದ್ದಿ ಮುಖ್ಯಸ್ಥ)
ಬೀದರ: 2015-16ನೇ ಸಾಲಿನಲ್ಲಿ ಬಜೆಟ್ ಮಂಡಿಸಿರುವ ಅಂದಿನ ಮುಖ್ಯಮಂತ್ರಿ ಸಿದ್ದರಾಯಯ್ಯ ಬೀದರ್ ಜಿಲ್ಲೆ ಮಿಲ್ಕ್ ಶೆಡ್ ಪ್ರದೇಶವಾಗಿ ಅಭಿವೃದ್ಧಿಗೊಳಿಸಿ ಹಾಲಿನ ಹೊಳೆ ಹರಿಸುವ ಯೋಜನೆ ಆರಂಭಿಸಿ ಇಂದಿಗ ನಾಲ್ಕು ವರ್ಷ ಕಳೆದರೂ ಯೋಜನೆಯ ಪ್ರಗತಿಯು ಆಶಾದಾಯಕವಾಗಿಲ್ಲ.
ಬೀದರ ಜಿಲ್ಲೆಯನ್ನು ಮಿಲ್ಕ್ ಶೆಡ್ ಜಿಲ್ಲೆ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಅಭಿವೃದ್ಧಿಗೊಳಿಸುವ ಕೆಲಸ ಕೂಡ ನಡೆದಿತ್ತು. ಯೋಜನೆ ಆರಂಭಕ್ಕೂ ಮುನ್ನ ಕೆಎಂಎಫ್ ಅಧಿಕಾರಿಗಳ ಪ್ರಕಾರ ಜಿಲ್ಲೆಯಲ್ಲಿ 2014-15 ಸಾಲಿನಲ್ಲಿ 1.37 ಲಕ್ಷ ಲೀಟರ್ ಹಾಲು ಸರಾಸರಿ ಉತ್ಪಾದನೆ ಇತ್ತು. ಯೋಜನೆ ಆರಂಭಗೊಂಡ ನಂತರ 2015-16ನೇ ಸಾಲಿನಲ್ಲಿ 1.40 ಲಕ್ಷ ಲೀಟರ್, 2016-17ನೇ ಸಾಲಿನಲ್ಲ 1.32 ಲಕ್ಷ ಲೀಟರ್, 2017-18ನೇ ಸಾಲಿನಲ್ಲಿ 1.67 ಲಕ್ಷ ಲೀಟರ್, 2018-19 ಸಾಲಿನಲ್ಲಿ 1.42 ಲಕ್ಷ ಲೀಟರ್ ಹಾಲು ಸರಾಸರಿ ಉತ್ಪಾದನೆ ಆಗಿದೆ ಎನ್ನುತ್ತಾರೆ ಇಲ್ಲಿನ ಕೆಎಂಎಫ್ ಅಧಿಕಾರಿಗಳು.
ವರವಾಗಿಲ್ಲ ಯೋಜನೆ : ಮಹತ್ವಕಾಂಕ್ಷಿಯಿಂದ ಬಯಲು ಸೀಮೆಯಲ್ಲಿ ಆರಂಭಗೊಂಡ ಮಿಲ್ಕ್ ಶೆಡ್ ಯೋಜನೆ ನಾಲ್ಕೇ ವರ್ಷದಲ್ಲಿ ಅವಸಾನದ ಹಾದಿ ಹಿಡಿದಿದೆ. ಹೈನುಗಾರಿಕೆ ಕ್ಷೇತ್ರ ವಿಸ್ತಾರವಾಗುವ ಬದಲು ಕುಗ್ಗಿರುವುದು ಯೋಜನೆಯೆಡೆಗೆ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಇರುವ ಅಸಡ್ಡೆ ಬಯಲು ಮಾಡುತ್ತದೆ. ಜನಪ್ರತಿನಿಧಿಗಳು ಅರ್ಹ ಫಲಾನುಭವಿಗಳಿಗೆ ಇಂಥ ಯೋಜನೆಗೆ ಸೇರಿಸಿದರೆ ನಿಜಕ್ಕೂ ಯೋಜನೆ ಸಫಲವಾಗುವುದರಲ್ಲಿ ಎರಡು ಮಾತು ಇರುತ್ತಿರಲಿಲ್ಲ ಎನ್ನುತ್ತಾರೆ ಅರ್ಹ ರೈತರು.
ಜಾನುವಾರುಗಳ ವಿವರ : 2012ರ ಜಾನುವಾರುಗಳ ಗಣತಿ ಆಧಾರದಲ್ಲಿ ಜಿಲ್ಲೆಯಲ್ಲಿ ಆಗ ಒಟ್ಟು 3,65,905 ಜಾನುವಾರುಗಳಿದ್ದವು. ಇದೀಗ 2018-19ನೇ ಸಾಲಿನ ಮಾಹಿತಿಯಂತೆ ಜಿಲ್ಲೆಯಲ್ಲಿ ಸುಮಾರು 3 ಲಕ್ಷ ಜಾನುವಾರುಗಳು ಇವೆ ಎನ್ನುತ್ತಿವೆ ಪಶು ಇಲಾಖೆ ವರದಿಗಳು. ಅಲ್ಲದೆ ಸದ್ಯ ಜಿಲ್ಲೆಯಲ್ಲಿ ಸುಮಾರು 86 ಸಾವಿರ ಕುರಿ, 1.84 ಲಕ್ಷ ಮೇಕೆ, 20,929 ಹಂದಿ, ಸೇರಿದಂತೆ ಒಟ್ಟಾರ 5.91 ಲಕ್ಷ ಜಾನುವಾರುಗಳು ಜಿಲ್ಲೆಯಲ್ಲಿ ಇವೆ. 2019ನೇ ಗಣತಿ ಪ್ರಕಾರ ಜಿಲ್ಲೆಯಲ್ಲಿ 65 ಸಾವಿರಕ್ಕೂ ಅಧಿಕ ಪಶುಗಳ ಸಂಖ್ಯೆ ಕಡಿಮೆಗೊಂಡಿದೆ ಎಂದು ತಿಳಿದುಬಂದಿದೆ.
ಯಾಕೆ ಕಡಿಮೆ ಆಯ್ತು ಜಾನುವಾರುಗಳ ಸಂಖ್ಯೆ?: 2012ರ ಗಣತಿ ಪ್ರಕಾರ 2,35,294 ದನಗಳು ಹಾಗೂ 1,30,611 ಎಮ್ಮೆಗಳ ಸಂಖ್ಯೆ ಇತ್ತು. ಇದೀಗ 1,74,302 ದನಗಳು ಹಾಗೂ 1,25,972 ಎಮ್ಮೆಗಳು ಇವೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟಾರೆ ಸರಾಸರಿ 65 ಸಾವಿರಕ್ಕೂ ಅಧಿಕ ಪಶುಗಳ ಸಂಖ್ಯೆ ಕಡಿಮೆಗೊಂಡಿದ್ದು, ಹಾಲಿನ ಹೊಳೆ ಹರಿಸುವ ನಿಟ್ಟಿನಲ್ಲಿ ಪಶು ಭಾಗ್ಯ ಯೋಜನೆ ಅಡಿಯಲ್ಲಿ ಖರೀದಿಸಿದ ಪಶುಗಳು ಎಲ್ಲಿ ಹೋದವು ? ಎಂಬ ಪ್ರಶ್ನೆಗೆ ಅಧಿಕಾರಿಗಳು ನೀಡಬೇಕಾಗಿದೆ ಉತ್ತರ.
ಗೋಲ್ಮಾಲ್ ಆಯ್ತಾ ಯೋಜನೆ?: ಪಶು ಭಾಗ್ಯ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ ಸಹಾಯಧನ ನೀಡುವ ಮೂಲಕ ಪಶುಗಳ ಖರೀದಿಗೆ ಪ್ರೋತ್ಸಾಹ ನೀಡಲಾಗಿತ್ತು. ಅರ್ಹ ಫಲಾನುಭವಿಗಳಿಂದ ಅರ್ಜಿ ಪಡೆದು ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಫಲಾನುಭವಿಗಳ ಆಯ್ಕೆ ನಡೆಯುವುದು ವಿಧಾನ. ಆದರೆ, ಆಯಾ ಕ್ಷೇತ್ರದ ಶಾಸಕರೆ ಆಯ್ಕೆ ಸಮಿತಿ ಅಧ್ಯಕ್ಷರು ಇರುವ ಹಿನ್ನೆಲೆಯಲ್ಲಿ ಅವರ ಪಕ್ಷದ ಬೆಂಬಲಿಗರಿಗೆ ಮಣೆ ಹಾಕಿರುವ ಆರೋಪಗಳು ಕೇಳಿ ಬಂದಿವೆ. ಅಲ್ಲದೆ, ಜಾನುವಾರುಗಳು ಖರೀದಿಸದೆ ಸರ್ಕಾರದ ಸಹಾಯ ಧನ ಪಡೆದಿರುವ ಆರೋಪಗಳು ಕೂಡ ಹೆಚ್ಚಿವೆ. ಪಶು ಭಾಗ್ಯ ಯೋಜನೆ ಅಡಿಯಲ್ಲಿ ಫಲಾನುಭವಿಗಳು ಖರೀದಿಸಿದ ಜಾನುವಾರುಗಳ ಬಹುತೇಕ ಫಲಾನುಭವಿಗಳ ಮನೆ, ಹೊಲದಲ್ಲಿ ಇಲ್ಲ ಎಂದು ಜನರು ಹೇಳುತ್ತಿದ್ದಾರೆ. ಸತ್ಯ ತಿಳಿದುಕೊಳ್ಳಬೇಕಾದರೆ ಅಧಿಕಾರಿಗಳು ತನಿಖೆಗೆ ಮುಂದಾಗಲ್ಲಿ ಎಂಬ ಅಭಿಪ್ರಾಯಗಳು ವ್ಯಕ್ತಪಡಿಸುತ್ತಿದ್ದಾರೆ.
ಕಾನೂನು ಕ್ರಮ: ಪಶು ಭಾಗ್ಯ ಯೋಜನೆ ಅಡಿಯಲ್ಲಿ ಖರೀದಿಸಿದ ಜಾನುವಾರುಗಳು ಕನಿಷ್ಟ ಮೂರು ವರ್ಷಗಳ ಕಾಲ ಪಶುಗಳು ಮಾರಾಟ ಮಾಡಲು ಅವಕಾಶ ಇಲ್ಲ. ಪಶು ಖರೀದಿಸುವಾಗ ಕರಾರು ಪತ್ರಕ್ಕೆ ಫಲಾನುಭವಿಗಳು ಸಹಿ ಮಾಡಿದ್ದಾರೆ. ಪಶು ಖರೀದಿಸದೆ ಸರ್ಕಾರದ ಸಹಾಯಧನ ಪಡೆದಿರುವ ಫಲಾನುಭವಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಸಹಾಯಧ ಪಡೆಯಬೇಕಾದರೆ ಅಧಿಕಾರಿಗಳ ಸಹಿ ಹಾಗೂ ವರದಿ ಕೂಡ ನೀಡಿರುತ್ತಾರೆ. ತಪ್ಪು ನಡೆದಿದ್ದರೆ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಕ್ಕೆ ಮೊಸ ಮಾಡಿದ್ದಾರೆಂದು ಪ್ರಕರಣ ಕೂಡ ದಾಖಲಿಸಲು ಅವಕಾಶ ಇದೆ ಎನ್ನುತ್ತಾರೆ ಪಶು ಇಲಾಖೆಯ ಉಪನಿರ್ದೇಶಕ ಡಾ| ಗೌತಮ ಅರಳಿ.
Date: 08-11-2019
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















