ಶೀಘ್ರ ದೂರು ಪೆಟ್ಟಿಗೆ ಅಳವಡಿಕೆ -ಸಚಿವ ಪ್ರಭು ಚವ್ಹಾಣ್
ಸಾರ್ವಜನಿಕರು ಈ ದೂರು ಪೆಟ್ಟಿಗೆ ಲಾಭ ಪಡೆದುಕೊಳ್ಳಬೇಕು
ಬೀದರ: ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರ ಬೀದರ್ ಹಾಗೂ ವಿವಿಧ ತಾಲೂಕು ಕೇಂದ್ರಗಳಲ್ಲಿನ ಪ್ರಮುಖ ಕಚೇರಿಗಳಲ್ಲಿ ಸೋಮವಾರ ದೂರು ಪೆಟ್ಟಿಗೆಗಳನ್ನು ಅಳವಡಿಸಲಾಗುತ್ತಿದೆ ಎಂದು ಪಶು ಸಂಗೋಪನೆ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ವಿವಿಧ ಸರ್ಕಾರಿ ಕಚೇರಿಗಳಲ್ಲಿ ಜನರ ಕೆಲಸಗಳಿಗೆ ದೀರ್ಘ ಅವಧಿಯವರೆಗೆ ಸ್ಪಂದನೆ ಸಿಗುತ್ತಿಲ್ಲ. ಸರ್ಕಾರದ ಯೋಜನೆಗಳ ಲಾಭ ಸಮರ್ಪಕವಾಗಿ ದೊರಕುತ್ತಿಲ್ಲ. ಸಣ್ಣಪುಟ್ಟ ಸಮಸ್ಯೆಗಳ ಪರಿಹಾರಕ್ಕೂ ತಿಂಗಳುಗಟ್ಟಲೇ ಅಲೆದಾಡಬೇಕಾಗುತ್ತಿದೆ. ಅಲ್ಲದೇ ಪ್ರಮುಖ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂಬ ಬಗ್ಗೆ ಸಾರ್ವಜನಿಕರಿಂದ
ವ್ಯಾಪಕ ದೂರುಗಳು ಬಂದಿವೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪೂರಕವಾಗಿ ನಾನಾ ಕಚೇರಿಗಳಲ್ಲಿ
ಸೋಮವಾರ ನಾನು ಸ್ವತಃ ವಿವಿಧ ಕಡೆಗಳಿಗೆ ತೆರಳಿ ಈ ದೂರು ಪೆಟ್ಟಿಗೆ ಅಳವಡಿಸುತ್ತಿದ್ದೇನೆ. ಅ.21ರಂದು ಬೆಳಿಗ್ಗೆ 10ಗಂಟೆಗೆ ಭಾಲ್ಕಿ, 11 ಗಂಟೆಗೆ ಹುಲಸೂರು, 12ಕ್ಕೆ ಬಸವಕಲ್ಯಾಣ, 1ಗಂಟೆಗೆ ಹುಮನಾಬಾದ್, 2ಗಂಟೆಗೆ ಚಿಟಗುಪ್ಪದಲ್ಲಿನ ತಹಸೀಲ್ದಾರ್ ಕಚೇರಿಗಳಲ್ಲಿ ದೂರು ಪೆಟ್ಟಿಗೆ ಇರಿಸಲಾಗುತ್ತದೆ. ಮಧ್ಯಾಹ್ನ 3ಗಂಟೆಗೆ ಬೀದರ್ ಜಿಲ್ಲಾಧಿಕಾರಿ ಕಚೇರಿ, ನಗರಸಭೆ ಕಚೇರಿ ಹಾಗೂ ತಹಸೀಲ್ದಾರ್ ಕಚೇರಿಗಳಲ್ಲಿ ದೂರು ಪೆಟ್ಟಿಗೆ ಅಳವಡಿಸಲಾಗುತ್ತದೆ. ನಂತರ ಔರಾದ್ ನಲ್ಲಿ ಇದನ್ನು ಅಳವಡಿಸುವುದಾಗಿ ವಿವರಿಸಿದ್ದಾರೆ.
ಸರ್ಕಾರದ ಯೋಜನೆಗಳ ಲಾಭ ಜನರಿಗೆ ಸಿಗಬೇಕು. ವಿವಿಧ ಇಲಾಖೆಗಳಲ್ಲಿ ಜನರ ಕೆಲಸ ಬೇಗ ಆಗಬೇಕು. ದೂರು ಅರ್ಜಿ ಬೇಗ ಇತ್ಯರ್ಥವಾಗಬೇಕು. ಭ್ರಷ್ಟಾಚಾರ ಮುಕ್ತವಾದ ಆಡಳಿತ ಇರಬೇಕೆಂಬುದು ತಮ್ಮ ಧ್ಯೇಯ. ಈಗ ಅಳವಡಿಸುತ್ತಿರುವ ದೂರು ಪೆಟ್ಟಿಗೆಯಲ್ಲಿ ಸಾರ್ವಜನಿಕರು ತಮ್ಮ ಯಾವುದೇ ಅಹವಾಲು ಸಲ್ಲಿಸಬಹುದು ಎಂದು ಹೇಳಿದ್ದಾರೆ.
ದೂರು ಪೆಟ್ಟಿಗೆಯಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆ, ಎಲ್ಲಿ ಏನಾಗಿದೆ? ಏನಾಗಬೇಕಿದೆ ಎಂಬ ಮಾಹಿತಿ ಬರೆದು ಹಾಕಬೇಕು. ಅಧಿಕಾರಿ ಅಥವಾ ಸಿಬ್ಬಂದಿ ಹಣದ ಬೇಡಿಕೆ ಇಟ್ಟರೂ ತಿಳಿಸಬೇಕು. ನಡೆದಿರುವ ಬಗ್ಗೆ ಮಾಹಿತಿ ಇದ್ದರೂ ಸಹ ಹೇಳಬಹುದು. ದೂರು ಪೆಟ್ಟಿಗೆಗೆ ಹಾಕುವ ಅರ್ಜಿಗಳನ್ನು ನಮ್ಮ ಕಚೇರಿ(ಉಸ್ತುವಾರಿ ಸಚಿವರ ಕಚೇರಿ) ಸಿಬ್ಬಂದಿ ನಿಯಮಿತವಾಗಿ ತೆಗೆದು ಪರಿಶೀಲನೆ ಮಾಡುತ್ತಾರೆ. ಇಲ್ಲಿ ಸ್ವೀಕರಿಸುವ ದೂರುಗಳ ಮೇಲೆ ಕೂಡಲೇ ಕ್ರಮಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ. ಭ್ರಷ್ಟಾಚಾರದ ಕುರಿತು ಮಾಹಿತಿ ನೀಡಿದವರು ಬಯಸಿದರೆ ಅ೮ವರ ಹೆಸರು ಗೌಪ್ಯವಾಗಿ ಸಹ ಇಡಲಾಗುತ್ತದೆ. ಹಂತ, ಹಂತವಾಗಿ ಹೆಚ್ಚಿನ ಕಚೇರಿಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗುವುದು.
ಸಾರ್ವಜನಿಕರು ಈ ದೂರು ಪೆಟ್ಟಿಗೆ ಲಾಭ ಪಡೆದುಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















