ಯಾರಿಗೂ ಬೇಡವಾಯಿತೆ ಬಿಎಸ್‌ಎಸ್‌ಕೆ..?
ಕಾರ್ಖಾನೆ ಬಂದಾದರೂ ಮೂಸಿ ನೋಡದ ರಾಜಕಾರಣಿಗಳು.
ಯಾರಿಗೂ ಬೇಡವಾಯಿತೆ ಬಿಎಸ್‌ಎಸ್‌ಕೆ..?
ಕಾರ್ಖಾನೆ ಬಂದಾದರೂ ಮೂಸಿ ನೋಡದ ರಾಜಕಾರಣಿಗಳು.
ದುರ್ಯೋಧನ ಹೂಗಾರ
ಹುಮನಾಬಾದ: ಸಾಲದ ಸುಳಿಯಲ್ಲಿ ನರಳುತ್ತಿರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ ಆರ್ಥಿಕ ನೆರವು ಕಲ್ಪಿಸಿ ಕೈಹಿಡಿದು ಮೇಲೆತ್ತುವ ಕೆಲಸ ರಾಜ್ಯ ಸರ್ಕಾರವಾಗಲ್ಲಿ ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಮಾಡದ ಹಿನ್ನೆಲೆಯಲ್ಲಿ ಜಿಲ್ಲೆಯ ಸಾವಿರಾರು ಸಂಖ್ಯೆಯ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆಯನ್ನು ನಂಬಿಕೊಂಡಿದ್ದ ನೂರಾರು ನೌಕರಸ್ಥ ಕುಟುಂಬಗಳು ಹತ್ತಾರು ಸಂಕಷ್ಟ ಎದುರಿಸುವಂತಾಗಿದೆ.
2018ರ ವಿಧಾನ ಸಭೆ ಚುನಾವಣೆಯಲ್ಲಿ ಎಚ್.ಡಿ ಕುಮಾರಸ್ವಾಮಿ ಹಾಗೂ ಬಿ.ಎಸ್ ಯಡಿಯೂರಪ್ಪ ಅವರು ಬೀದರ ಸಹಕಾರ ಸಕ್ಕರೆ ಕಾರ್ಖಾನೆಗೆ ಸೂಕ್ತ ಆರ್ಥಿಕ ನೆರವು ಕಲ್ಪಿಸಿ ಪುನಶ್ಚೇತನ ಗೊಳಿಸುವುದಾಗಿ ಭರವಸೆ ನೀಡಿ ಮತಯಾಚನೆ ಮಾಡಿದರು. ಆದರೆ, ಇಬ್ಬರು ನಾಯಕರು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದು ಇಂದಿಗೂ ಕೂಡ ಆರ್ಥಿಕ ನೆರವು ಕಲ್ಪಿಸುವಲ್ಲಿ ನಾಯಕರು ಮುಂದಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳು, ಆಶ್ವಾಸನೆಗಳು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ನುಡಿದಂತೆ ನಡೆಯುವ ನಾಯಕರೇ ಇಲ್ಲ ಎಂದು ರೈತರು ಗೋಳ ಹಾಕಿಕೊಳ್ಳುತ್ತಿದ್ದಾರೆ.
ಆರಂಭಗೊಳ್ಳುವುದು ಅನುಮಾನ: ಬೀದರ್ ಜಿಲ್ಲೆಯ ರೈತರ ಜೀವನಾಡಿ ಎಂದೇ ಗುರುತಿಸಿಕೊಂಡ ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಕಳೆದ ಕೆಲವು ವರ್ಷಗಳಿಂದ ಅಂಕುಡೊಂಕಾಗಿ ಕಾರ್ಯ ನಿರ್ವಹಿಸುತ್ತಿದೆ. ಕಳೆದ ವರ್ಷ ಸೂಕ್ತ ಆರ್ಥಿಕ ನೆರವು ಇಲ್ಲದ ಕಾರಣ ಕಾರ್ಖಾನೆ ಆರಂಭಗೊಳ್ಳದೆ ತನ್ನ ಬಾಗಿಲು ಮುಚ್ಚಿಕೊಂಡಿತ್ತು. ಇದರಿಂದ ಕಬ್ಬು ಬೆಳೆದ ರೈತರು ಅನೇಕ ಸಂಕಷ್ಟ ಎದುರಿಸುವಂತೆ ಮಾಡಿತ್ತು. ಕಬ್ಬು ಇತರೆ ಕಾರ್ಖಾನೆಗಳಿಗೆ ಸಾಗಿಸಲು ಪ್ರತಿನಿತ್ಯ ರಾಜಕಾರಣಿಗಳ ಮನೆಗೆ ಭೇಟಿ ನೀಡಿ ಹತ್ತಾರುಬಾರಿ ಮನವರಿಕೆ ಮಾಡಿದ ಘಟನೆಗಳು ನಡೆದಿವೆ ಎಂದು ರೈತರು ತಿಳಿಸಿದ್ದು, ಇದೀಗ ಕೂಡ ಸೂಕ್ತ ಅನುದಾನ ಇಲ್ಲದ ಕಾರಣ ಈ ವರ್ಷ ಕೂಡ ಕಾರ್ಖಾನೆ ಆರಂಭಗೊಳ್ಳುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ.
ನೌಕರಸ್ಥರ ಬಾಳು ಬೀದಿಪಾಲು: ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ಸರಾಸರಿ 30 ತಿಂಗಳಕ್ಕೂ ಅಧಿಕ ಸಂಬಳ ಬಾಕಿ ಉಳುದುಕೊಂಡಿದೆ. ನೌಕರರಿಗೆ ಸಿಗಬೇಕಾದ ವಿವಿಧ ಸೌಲಭ್ಯಗಳು ಪಿಂಚಣಿಗಳು ಸೇರಿದಂತೆ ಒಟ್ಟಾರೆ ಸುಮಾರು 33 ಕೋಟಿಗೂ ಅಧಿಕ ಹಣ ಪಾವತಿ ಆಗಬೇಕಿದೆ. ಕಾರ್ಖಾನೆಯ ಪರಿಸರದಲ್ಲಿ ವಾಸವಾಗಿರುವ ನೂರಕ್ಕೂ ಅಧಿಕ ನೌಕರಸ್ಥರ ಕುಟುಂಬಗಳ ಪಾಡು ಹೇಳತೀರದು. ನಿತ್ಯ ಹತ್ತಾರು ಸಮಸ್ಯೆಗಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಜಿಲ್ಲೆಯ ಯಾರೊಬ್ಬ ಜನಪ್ರತಿನಿಧಿಗಳಾಗಲಿ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಭೇಟಿ ನೀಡಿ ನೌಕರಸ್ಥರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ ಎಂದು ಅನೇಕ ಕಾರ್ಮಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಕೂಡಲೇ ಸಂಬಳ ಪಾವತಿಸಿ: ಆಡಳಿತ ಮಂಡಳಿ ಅವಧಿ ಪೂರ್ಣಗೊಳ್ಳುತ್ತಿದ್ದಂತೆ ಜಿಲ್ಲಾಧಿಕಾರಿಗಳು ಉಸ್ತುವಾರಿ ವಹಿಸಿಕೊಂಡ ಸಂದರ್ಭದಲ್ಲಿ ನೌಕರಸ್ಥರ ಸಮಸ್ಯೆಗೆ ಮುಕ್ತಿ ದೊರೆಯುತ್ತದೆ ಎಂದು ಸಿಬ್ಬಂದಿಗಳು ನಂಬಿದ್ದರು. ಸದ್ಯ ಕಾರ್ಖಾನೆಯಲ್ಲಿ ಸುಮಾರು 10 ಕೋಟಿ ಮೊತ್ತದ 32 ಸಾವಿರ ಕ್ವಿಂಟಲ್ ಸಕ್ಕರೆ ಇದ್ದು, ಸಕ್ಕರೆ ಮಾರಾಟಮಾಡಿ ಸಂಬಳ ಪಾವತಿಸುವ ಭರವಸೆ ಕೂಡ ಈ ಹಿಂದೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಆದರೆ, ಸಕ್ಕರೆಗೆ ಸೂಕ್ತ ದರ ಬರದ ಹಿನ್ನೆಲೆಯಲ್ಲಿ ಸಕ್ಕರೆ ಮಾರಾಟ ಪ್ರಕ್ರಿಯೆಗಳು ನಡೆದಿಲ್ಲ ಎಂದು ಕಾರ್ಖಾನೆಯ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಆದರೆ, ನೌಕರಸ್ಥರು ಮಾತ್ರ ಮೊದಲು ಸಂಬಳ ನೀಡಿ ನಮ್ಮ ಕುಟುಂಬಗಳು ಉಳಿಸಿ ಎಂದು ಹೇಳುತ್ತಿದ್ದಾರೆ.
https://play.google.com/store/apps/details?id=kknewsonline.inಹದಗೆಟ್ಟ ಆರ್ಥಿಕ ಸ್ಥಿತಿ: ಸಕ್ಕರೆ ಕಾರ್ಖಾನೆಯ ಆರ್ಥಿಕ ಸ್ಥಿತಿ ಸಂಪೂರ್ಣ ಹಾಳಾಗಿದ್ದು, ಸಾಲದ ಹಣಕ್ಕಾಗಿ ಎದುರು ನೋಡುವ ಸ್ಥಿತಿ ಇಲ್ಲಿದೆ. ಮಾರ್ಚ್ 2019ಕ್ಕೆ ಒಟ್ಟಾರೆ ಸಾಲ, ಬಡ್ಡಿ ಹಾಗೂ ಇತರೆ ಬಾಕಿಗಳು ಸೇರಿ ಸುಮಾರು 307 ಕೋಟಿ ಹಾನಿ ಸಂಭಸಿದೆ ಎಂದು ಹೇಳಲಾಗಿದ್ದು, ಸದ್ಯ ಕಾರ್ಖಾನೆಯಲ್ಲಿ ವಿದ್ಯುತ್ ಸಮಸ್ಯೆ ಇದ್ದು, ಒಂದು ಕೋಟಿ ಬಿಲ್ ಬಾಕಿ ಉಳಿದುಕೊಂಡಿದೆ. ಕಾರ್ಖಾನೆ ಆರಂಭಿಸಬೇಕಾದರೆ 50ಕೋಟಿಗೂ ಅಧಿಕ ಹಣದ ಅವಶ್ಯಕತೆ ಇದೆ ಎಂದು ಲೇಕ್ಕಪತ್ರ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ರಾಜಕೀಯಕ್ಕೆ ಮಾತ್ರ ಸೀಮಿತ: ಜಿಲ್ಲೆಯಲ್ಲಿ ಘಟಾನುಘಟಿ ರಾಜಕಾರಣಿಗಳು ಇದ್ದರೂ ಕೂಡ ಬಿಎಸ್‌ಎಸ್‌ಕೆ ಕಾರ್ಖಾನೆ ಪ್ರಾರಂಭದ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಿಲ್ಲ. ಸಕ್ಕರೆ ಕಾರ್ಖಾನೆಯ ವಿಷಯ ಕೇವಲ ರಾಜಕೀಯಕ್ಕೆ ಮಾತ್ರ ಬಳಕೆ ಮಾಡಲಾಗುತ್ತಿದೆ. ಕಬ್ಬು ಬೆಳೆಯುವ ರೈತರ ಬಗ್ಗೆ ಚಿಂತಿಸುವ, ಕಾರ್ಖಾನೆಯ ಕಾರ್ಮಿಕರ ನೌಕರರ ಬಗ್ಗೆ ಚಿಂತಿಸುವ ಮನೋಭಾವನೆ ಇಲ್ಲಿನ ರಾಜಕಾರಣಿಗಳಲ್ಲಿ ಕಂಡು ಬರುತ್ತಿಲ್ಲ. ಈ ಹಿಂದೇ ಕಾರ್ಖಾನೆಯ ಒಳಗೆ ಹಾಗೂ ಹೊರಗೆ ಭಾರಿ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆಯುತ್ತಿದವು ಆದರೆ, ಇಂದಿನ ದಿನಗಳಲ್ಲಿ ಯಾವ ಸಂಘಟನೆಗಳು ಕಾರ್ಖಾನೆಗಳ ಕಡೆಗೆ ಮುಖಮಾಡುತ್ತಿಲ್ಲ. ಸದ್ಯ ಬಿಎಸ್‌ಎಸ್‌ಕೆ ಯಾರಿಗೂ ಬೇಡವಾದಂತ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಕಾರ್ಮಿಕ ಕುಟುಂಬಗಳ ಅಳಲು ತೋಡಿಕೊಳ್ಳುತ್ತಿದ್ದಾರೆ.
Date: 28-11-2020 : www.kknewsonline.in :
ಹೆಚ್ಚಿನ ಸುದ್ದಿಗಳಿಗಾಗಿ ಓದಿ ಕಸ್ತೂರಿ ಕಿರಣ ಪತ್ರಿಕೆ
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















