ಚಿಟಗುಪ್ಪ ವ್ಯಾಪಾರಿಗಳಲ್ಲಿ ಕಂಡುಬರುತ್ತಿದೆ ಕೊರೊನಾ ಸೋಂಕು..!
ಚಿಟಗುಪ್ಪ ವ್ಯಾಪಾರಿಗಳಲ್ಲಿ ಕಂಡುಬರುತ್ತಿದೆ ಕೊರೊನಾ ಸೋಂಕು..!
50ಕ್ಕೂ ಅಧಿಕ ಪ್ರಕರಣ – 4 ಜನರ ಸಾವು – ಸೀಲ್ ಡೌನ್ ಅಗತ್ಯವೇ?
-ದುರ್ಯೋಧನ ಹೂಗಾರ-
ಬೀದರ: ಬೀದರ ಜಿಲ್ಲೆಯಲ್ಲಿಯೇ ಚಿಟಗುಪ್ಪ ಪಟ್ಟಣದಲ್ಲಿ ಕೋವಿಡ್-19 ಸೋಂಕಿನ ಹಾವಳಿ ಹೆಚ್ಚಾಗಿದ್ದು, ಪಟ್ಟಣದ ಜನ ಜೀವ ಕೈಯಲ್ಲಿ ಹಿಡಿದು ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಪಟ್ಟಣದಲ್ಲಿ ಸೀಲ್ ಡೌನ್ ಮಾಡುವ ಅಗತ್ಯ ಇದೆ ಎಂದು ಇಲ್ಲಿನ ಜನರು ಚರ್ಚೆ ನಡೆಸಿದ್ದಾರೆ.
ಬೀದರ ಜಿಲ್ಲೆಯಲ್ಲಿಯೇ ಚಿಟಗುಪ್ಪ ಪಟ್ಟಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಯಾರಿಗೆ ಹೇಗೆ ಸೋಂಕು ತಗುಲಿದೆ ಎಂಬುದೇ ಇಲ್ಲಿನ ವೈದ್ಯರಿಗೆ ತಲೆನೋವಾಗಿದೆ. ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲದ ಜನರಿಗೆ ಸೋಂಕು ಪತ್ತೆಯಾಗುತ್ತಿದ್ದು, ಪಟ್ಟಣದ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಸಂಭವಿಸಿದ ಸಾವಿನ ಸಂಖ್ಯೆಗೆ ಹೋಲಿಸಿದರೆ ಅರ್ಧದಷ್ಟು ಸಾವುಗಳು ಚಿಟಗುಪ್ಪ ಪಟ್ಟಣದಲ್ಲಿ ಸಂಭವಿಸಿವೆ. ಈ ವರೆಗೆ ಆರೋಗ್ಯ ಇಲಾಖೆಯ ಪ್ರಕಾರ 4ಜನರ ಸಾವು ಸಂಭವಿಸಿದ್ದು, ಇನ್ನೊಂದು ಹೈದ್ರಾಬಾದನಲ್ಲಿ ಸಾವಗೀಡಾದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಪಟ್ಟಣದ ತರಕಾರಿ ವ್ಯಾಪಾರಿ, ಹಣ್ಣು ಮಾರಾಟಗಾರ, ಕಿರಾಣಿ ಅಂಗಡಿ, ಮೇಕಾನಿಕ್, ವಕೀಲ ಸೇರಿದಂತೆ ವಿವಿಧ ಜನರಲ್ಲಿ ಸೋಂಕು ಪತ್ತೆಯಾಗಿರುವುದು ನೋಡಿದರೆ ಪಟ್ಟಣದಲ್ಲಿ ಗಂಭೀರ ಸ್ಥಿತಿ ಇದೆ ಎಂದು ತಿಳಿದುಕೊಳ್ಳಬಹುದಾಗಿದೆ. ಚಿಟಗುಪ್ಪ ಪಟ್ಟಣದಲ್ಲಿ ಜೂನ್ 20ರ ವರೆಗೆ ಸುಮಾರು 45ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದು, ತಾಲೂಕಿನಲ್ಲಿ 50ಕ್ಕೂ ಅಧಿಕ ಜನರಲ್ಲಿ ಸೋಂಕು ಪತ್ತೆಯಾಗಿರುವುದು ಖಚಿತವಾಗಿದೆ. ತಾಲೂಕಿನ ನಿರ್ಣಾ ಗ್ರಾಮ, ಉಡಬಾಳ, ನಾಗನಕೇರಾ, ಹಿಲಾಲಪೂರ್ ಗ್ರಾಮಗಳಲ್ಲಿ ಕೂಡ ಸೋಂಕು ಪತ್ತೆಯಾಗಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಪಟ್ಟಣದಲ್ಲಿನ ಸುಮಾರು 450 ಜನರ ಮಾದರಿಯನ್ನು ಕಳೆದ ವಾರ ಪಡೆದು ಪರೀಕ್ಷೆಗೆ ಕಳುಹಿಸಿದ್ದು, ಈ ಪೈಕಿ ಅರ್ಧದಷ್ಟು ಜನರ ವರದಿಗಳು ಬಂದಿವೆ. ಈ ಪೈಕಿ 25 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿರುವುದು ತಿಳಿದ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಆತಂಕ ಹೆಚ್ಚಿಸುವಂತೆ ಮಾಡಿದೆ. ಇನ್ನೂ ಅರ್ಧದಷ್ಟು ಜನರ ವರದಿಗಳಲ್ಲಿ ಎಷ್ಟು ಜನರಿಗೆ ಪಾಸಿಟಿವ್ ಬರುತ್ತದೆಯೋ ಎಂದು ಕಾದು ನೋಡಬೇಕಾಗಿದೆ.
ಆತಂಕದಲ್ಲಿ ವಿದ್ಯಾರ್ಥಿಗಳು: ಪಟ್ಟಣದಲ್ಲಿ ಮೂರು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿದ್ದು, ತಲಾ ಒಂದು ಪರೀಕ್ಷಾ ಕೇಂದ್ರಗಳಲ್ಲಿ ಸರಾಸರಿ 250 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದಾರೆ. ಒಂದು ಪರೀಕ್ಷಾ ಕೇಂದ್ರ ಸೋಂಕಿತರು ಇರುವ ಪ್ರದೇಶದಲ್ಲಿ ಇರುವ ಕಾರಣ ಪರೀಕ್ಷಾ ಕೇಂದ್ರ ಬದಲಾಗುವ ಸಾಧ್ಯತೆ ಇದೆ. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಥರ್ಮ್ಲ್ ಸ್ಕ್ಯಾನಿಂಗ್ ಮಾಡಿಯೇ ಕೇಂದ್ರದಲ್ಲಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಒಂದು ಕೋಣೆಯಲ್ಲಿ 18-20 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದಾರೆ ಎಂದು ಹುಮನಾಬಾದ ಕ್ಷೇತ್ರ ಶಿಕ್ಷಾಣಾಧಿಕಾರಿ ಮಾಹಿತಿ ನೀಡಿದ್ದಾರೆ. ಆದರೆ, ಪ್ರತಿನಿತ್ಯ ಸೋಂಕಿತರು ಪತ್ತೆಯಾಗುತ್ತಿರುವ ಕಾರಣ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಆತಂಕ ಮನೆ ಮಾಡಿದೆ.
Date:20-06-2020 www.kknewsonline.in ಹೆಚ್ಚಿನ ಸುದ್ದಿಗಾಗಿ ಓದಿ ಕಸ್ತೂರಿ ಕಿರಣ ಪತ್ರಿಕೆ
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















